Site icon ಒಡನಾಡಿ

ವೃತ್ತಿ ಬದುಕಿನಲ್ಲಿ ಸಾರ್ಥಕತೆ ಕಂಡ ಅಘನಾಶಿನಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಮಮತಾ ನಾಯ್ಕರಿಗೆ ಒಲಿದ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯ ಗರಿ

“ಪ್ರತಿಭೆ” ಎಂಬುದು ಸಾಧಕನ ಸ್ವತ್ತೇ ಹೊರತು, ಸೋಮಾರಿಯ ಸ್ವತ್ತಲ್ಲ ಎಂಬುದೊಂದು ಮಾತಿದೆ. ಯಾರು ಸತತ ಪರಿಶ್ರಮ, ಸತ್ವ ಪೂರ್ಣ ಕಾರ್ಯ ಮಾಡುತ್ತಾ, ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕೆ ಪ್ರಾಮಾಣಿಕವಾಗಿ ಸೇವಾ ಮನೋಭಾವದಿಂದ ದುಡಿಯುತ್ತಾರೋ, ಪ್ರಯತ್ನಕ್ಕೆ ತಕ್ಕ ಫಲವನ್ನು ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ಕಾಣುತ್ತಾರೋ ಅಂತಹ ವ್ಯಕ್ತಿಗಳಿಗೆ ಇಡೀ ಸಮುದಾಯ ಸಹಕರಿಸುವುದರ ಜೊತೆಗೆ ಅವರನ್ನು ಗುರುತಿಸಿ, ಗೌರವಿಸುವ ಕೆಲಸಕ್ಕೆ ಸರಕಾರವು ಮುಂದಾಗುತ್ತದೆ ಎಂಬುದಕ್ಕೆ ಜ್ವಲಂತ ಸಾಕ್ಷಿ ಅಘನಾಶಿನಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿಯಾಗಿ ಕಳೆದ ಒಂದುವರೆ ದಶಕಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವವರು ಮಮತಾ ರಾಮಚಂದ್ರ ನಾಯ್ಕರವರು. ಮಮತಾ ಎಂದರೆ ಸಂಸ್ಕೃತದಲ್ಲಿ ತಾಯಿಯ ಪ್ರೀತಿ, ವಾತ್ಸಲ್ಯ ಎಂದರ್ಥ. ಇಂತಹ ಮಾತೃ ಸ್ವರೂಪಿ ಪ್ರತಿಭೆ, ಪರಿಶ್ರಮಗಳ ಮೂಲಕ ತನ್ನ ಶಾಲಾ ವ್ಯಾಪ್ತಿಯ ವಿಸ್ತಾರದ ಭಾಗವಾಗಿ, ಅತ್ಯಂತ ಹಿಂದುಳಿದ ಅಕ್ಷರ ವಂಚಿತ ಬಡ ಕುಟುಂಬಗಳ ವಿದ್ಯಾರ್ಥಿಗಳ ಪಾಲಿನ ಆರಾಧ್ಯ ದೇವತೆಯಾಗಿರುತ್ತಾರೆ. ಸಮಾಜಮುಖಿ ಚಿಂತನೆಯ ಮೂಲಕ ವಿದ್ಯಾರ್ಥಿಗಳ ಭವಿಷ್ಯತ್ತನ್ನು ಕೇಂದ್ರೀಕರಿಸಿ ಸತತ ಆರು ವರ್ಷಗಳ ಕಾಲ ಎಸ್. ಎಸ್. ಎಲ್. ಸಿ. ಫಲಿತಾಂಶವನ್ನು ನೂರಕ್ಕೆ ನೂರರಷ್ಟು ಇವರ ಶ್ರಮದ ಜೊತೆಗೆ ಇತರ ಶಿಕ್ಷಕರ ಶ್ರಮ ಸಾರ್ಥಕವಾಗಿದೆ. ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಎನ್ನುವ ಪಟ್ಟ ಇವರ ಮುಡಿಗೇರಿ ಕುಳಿತಿರುವುದೇ ಇವರ ಕೃತ್ರತ್ವ ಶಕ್ತಿಗೆ ಸಾಕ್ಷಿಯಾಗಿದೆ. ಇವರಿಗೆ ಅಭಿನಂದನೆಗಳು.

“ಯಾವ ಬಣ್ಣ ಬದಲಾದರೂ, ಒಲುಮೆಯ ಬಣ್ಣ ಬದಲಾಗದು” ಎಂಬ ಹಿರಿಯರ ಮಾತಿನಂತೆ ಯಾವುದೇ ವ್ಯಕ್ತಿಯ ಬಣ್ಣ ಬದಲಾಗುವುದು ಭೌತಿಕ ಸ್ಥಿತಿಯಿಂದಲ್ಲ. ಆಡುವ ಮಾತಿನಿಂದಲ್ಲ. ಅಂತರಂಗದ ಅಪ್ಪಟ ಮಾನವೀಯ ಮೌಲ್ಯಗಳಿಂದ. ಎಲ್ಲಾ ವಿದ್ಯಾರ್ಥಿಗಳು ತನ್ನ ಮಕ್ಕಳೆಂದೇ ಭಾವಿಸಿ ಮಾತೃ ಸ್ವರೂಪಿಯಾಗಿ ಅಕ್ಕರೆಯ ಅಕ್ಷರದ ಬೀಜ ಬಿತ್ತಿದ ಮಮತಾ ನಾಯ್ಕರವರ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು.

ಹೋರಾಟದಲ್ಲಿ ನಿಜವಾದ ಗೆಲುವು
ಹೋರಾಡಿ ಹೋರಾಡಿ ಸೋತರು ಚೆಲುವು– ದಿನಕರ ದೇಸಾಯಿ ಅವರು ನಂಬಿದ ಬದುಕಿನಂತೆ, ಬದುಕಿನಲ್ಲಿ ಎದುರಾದ ಎಲ್ಲಾ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಕಡಲಿನಲ್ಲಿರುವ ಮುತ್ತನ್ನು ಆರಿಸುವ ಬದಲು ಮುತ್ತು ಬಿತ್ತುವ, ಅದನ್ನು ವಿದ್ಯಾರ್ಥಿಗಳ ಬದುಕಿನಲ್ಲಿ ಅಳವಡಿಸಲು ಪಣತೊಟ್ಟ ಹೋರಾಟಗಾತಿ೯ ಮಮತಾ ನಾಯ್ಕರವರು ದಿನದಿಂದ ದಿನಕ್ಕೆ ತನ್ನ ಅಂತರ್ ಶಕ್ತಿಯನ್ನು ಹೆಚ್ಚಿಸಿಕೊಂಡು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ಅಕ್ಷರ ಪಾತ್ರೆಯಾಗಿ ಬೆಳಗಿದವಳು.

ಮಕ್ಕಳನ್ನು ಪ್ರೀತಿಸಿ ಗೆಲುವನ್ನು ಕಂಡವರು. ಬದುಕು ಒಂದೆಡೆ ನಿಂತ ನೀರಲ್ಲ. ಸದಾ ಹರಿಯುವ ನದಿಯಂತೆ.ಎಲ್ಲಾ ಏರಳಿತ ಕಂಡ ಗಟ್ಟಿ ಮನಸ್ಸಿನ ಮಕ್ಕಳ ಪಾಲಿನ ಆರಾಧ್ಯ ದೇವತೆಯಂತಿರುವ ಕ್ರಿಯಾಶೀಲ ವ್ಯಕ್ತಿತ್ವರಾಗುವ ಮೂಲಕ ಮಾದರಿಯಾದವರು.

ಕಾದಬೇಕು ತಮ್ಮ ಈ ಬದುಕಿನಲ್ಲಿ
ಮತ್ತೆ ಕಾಯಬೇಕು- ಕಾದು ಅರಳಬೇಕು
ಕೆರಳಿ, ಕಾದು, ಅರಳಿ ಪರಿಮಳಿಸಬೇಕು
ಡಾ. ಎನ್. ಆರ್. ನಾಯಕರವರ ಕವನದ ಸಾಲು ಪ್ರತಿಯೊಬ್ಬರ ಬದುಕಿನಲ್ಲಿ ಒಂದೊಂದು ಅವಕಾಶಗಳು ಅವರಿಗರಿಯದೆ ಕಾಯುತ್ತಲೇ ಇರುತ್ತದೆ.ಕಾದು ಅರಳಿದ ಪ್ರತಿಭೆ ಅಘನಾಶಿನಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮಮತಾ ನಾಯ್ಕ. ಅಘನಾಶಿನಿಯು ಯಾವುದೇ ದೊಡ್ಡ ಆಣೆಕಟ್ಟು ಅಥವಾ ಕೈಗಾರಿಕಾ ಮಾಲಿನ್ಯವಿಲ್ಲದೆ ನೈಸರ್ಗಿಕವಾಗಿ ಹರಿಯುವ ರಾಜ್ಯದ ಪ್ರಮುಖ ಶುದ್ಧ ನದಿಗಳಲ್ಲಿ ಒಂದಾಗಿದೆ. ಅಂತೆಯೇ ಯಾವುದೇ ಕಲ್ಮಶವಿಲ್ಲದೆ ಪರಿಶುದ್ಧವಾಗಿ ಮಕ್ಕಳ ಭವಿಷ್ಯತ್ತಿನ ಮಾತೃ ಸ್ವರೂಪಿ ಅಧ್ಯಾಪಕರು. ಕೆಇಎಸ್ ಪದವಿ ಪಡೆದು ಮುಖ್ಯಾಧ್ಯಾಪಕಿ ಹುದ್ದೆಯನ್ನು ಅಲಂಕರಿಸಿದವರು. ಯಾವಾಗ ಅಘನಾಶಿನಿ ಅಂತ ಪವಿತ್ರ ಭೂಮಿಯ ಶಾಲೆಗೆ ವರ್ಗವಾಗಿ ಬಂದರೋ ಆವತ್ತಿನಿಂದಲೇ ಅವರು ಆ ಶಾಲೆಯ ಜವಾಬ್ದಾರಿಯ ನೊಗಹೊತ್ತ ಮುಖ್ಯಾಧ್ಯಾಪಕರಾದವರು.

ಮೂಲತಃ ಕುಮಟಾ ತಾಲೂಕಿನ ಕೋನಳ್ಳಿಯವರಾದ ಮಮತಾ ನಾಯ್ಕರವರು ತಂದೆ ರಾಮಚಂದ್ರ ನಾಯ್ಕ, ತಾಯಿ ಮಂಜುಳಾ ನಾಯ್ಕರವರ ಮುದ್ದಿನ ಮಗಳಾಗಿ ೧೯೭೮ ರಲ್ಲಿ ಜನಿಸಿದರು. ಬಾಲ್ಯದ ಶಿಕ್ಷಣವನ್ನು ಸಿದ್ದಾಪುರದ ಮೆಣಸಿ ಮತ್ತು ಕುಳಿಬೀಡ್ ಪ್ರಾಥಮಿಕ ಶಾಲೆಯಲ್ಲಿಯೂ, ಹಲಗೇರಿಯಲ್ಲಿ ಪ್ರೌಢ ಶಿಕ್ಷಣ ಪೂರೈಸಿರುತ್ತಾರೆ. ಪದವಿ ಮತ್ತು ವೃತ್ತಿ ಬದುಕಿನ ಶಿಕ್ಷಣ ಬಿ. ಎಡ್. ಪದವಿಯನ್ನು ಕುಮಟಾದ ಡಾ. ಎ.ವಿ.ಬಾಳಿಗಾ ಕಾಲೇಜಿನಲ್ಲಿ ಪೂರೈಸಿ,೨೦೦೪ ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಸರಕಾರಿ ಪ್ರೌಢ ಶಾಲೆಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ, ೨೦೧೨ ರಂದು ಸರಕಾರಿ ಪ್ರೌಢಶಾಲೆ ಅಘನಾಶಿನಿಗೆ ವರ್ಗವಾಗಿ ಬಂದರು. ಇದೇ ಸಂದರ್ಭದಲ್ಲಿ ಕೆ. ಇ. ಎಸ್. ಪದವಿಯನ್ನು ಪೂರೈಸಿರುವ ಕಾರಣಕ್ಕಾಗಿ ಆ ಶಾಲೆಯ ಮುಖ್ಯಾಧ್ಯಾಪಕಿ ಪಟ್ಟವೂ ಅವರನ್ನರಸಿ ಬಂದವು. ಕಳೆದ ಆರು ವರ್ಷಗಳಿಂದ ಗ್ರಾಮೀಣ ಪ್ರದೇಶದ ಪ್ರೌಢಶಾಲೆಯೊಂದು ಎಸ್.ಎಸ್.ಎಲ್.ಸಿ.ಯಲ್ಲಿ ಸತತವಾಗಿ ಆರು ವರ್ಷಗಳ ಕಾಲ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿರುವುದು ಇವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ. ತನ್ನ ವೃತ್ತಿ ಬದುಕಿನ ಸಹೋದ್ಯೋಗಿಗಳನ್ನು ಒಂದೇ ಕುಟುಂಬದ ಸದಸ್ಯರೆಂದು ಭಾವಿಸಿ, ಅವರಲ್ಲಿ ಪ್ರೀತಿ, ವಿಶ್ವಾಸದ ಮಾತುಗಳನ್ನಾಡಿ ಶಾಲಾ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ, ಕಾರ್ಯ ಪ್ರವೃತ್ತರಾಗಿ ಸಾಂಘಿಕ ಹೋರಾಟದ ಫಲವೇ ಇದೊಂದು ಮಾದರಿ ಶಾಲೆಯಾಗಿ ಪರಿವರ್ತನೆ ಆಗಿರುವುದಕ್ಕೆ ಸಾಕ್ಷಿಯಾಗಿದೆ. ಎಸ್‌. ಡಿ.ಎಂ.ಸಿ.ಮತ್ತು ದಾನಿಗಳ ಸಹಕಾರದಿಂದ ಶಾಲೆಯ ಸಂಪೂರ್ಣ ಅಭಿವೃದ್ಧಿಯ ಜೊತೆಗೆ ಜಿಲ್ಲಾ ಮಟ್ಟದ “ಬೆಸ್ಟ್ ಎಸ್‌.ಡಿ.ಎಂ.ಸಿ.” ಪ್ರಶಸ್ತಿಯು ಈ ಶಾಲೆಗೆ ಒಲಿದಿದೆ.

ಕುರ್ಚಿಯ ಮೇಲೆ ಕುಳಿತುಕೊಳ್ಳುವುದು
ಆಳುವುದಕಲ್ಲ ಸೇವೆ ಮಾಡುವುದಕ್ಕೆ
ಅಧಿಕಾರದ ದರ್ಪ ತೋರಿಸುವುದಕಲ್ಲ
ಕರ್ತವ್ಯ ಪರಿಪಾಲನೆಗೆ- ಎಂಬ ಪಾಟೀಲರ ಅನುಭವದ ನುಡಿಯಂತೆ ಶಿಕ್ಷಣ ಇಲಾಖೆಯ ಘನತೆ,ಗೌರವ ಹೆಚ್ಚಿಸಿದ ಮುಖ್ಯಾಧ್ಯಾಪಕಿ, “ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ”, ಎಂದು ಪಾಲಕರಲ್ಲಿ ಸದಾ ಜಾಗೃತಿ ಮೂಡಿಸಿರುತ್ತಾರೆ.ಎಲ್ಲರಿಗಿಂತ ಭಿನ್ನವಾಗಿ ಯೋಚಿಸುವ, ವಿಭಿನ್ನವಾಗಿ ಕಾರ್ಯಯೋಜನೆ ರೂಪಿಸುವ, ಹೊಸ ಬಗೆಯ ಪ್ರತಿಮೆಗಳನ್ನು ಬಳಸುವ, ಪ್ರಯೋಗ ಶೀಲ ಚಿಂತಕಿ, ಸಾಹಿತ್ಯ ಕ್ಷೇತ್ರದ ಅನನ್ಯ ಅನುಭವದೊಂದಿಗೆ ತನ್ನ ಬದುಕಿನ ಬಹುಪಾಲು ಸಮಯವನ್ನು ವಿದ್ಯಾರ್ಥಿಗಳ ಪಾಲಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿರುತ್ತಾರೆ. ಸಾಹಿತ್ಯದ ಕವಿಗೋಷ್ಠಿ ಹಾಗೂ ವೈಚಾರಿಕ ಗೋಷ್ಠಿಯಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದ ಅನುಭವ ಇವರಿಗಿದೆ.

ಪತಿ ಪ್ರಮೋದ ನಾಯ್ಕರವರು ಕಾಲೇಜು ಉಪನ್ಯಾಸಕರಾಗಿ, ಕುಮಟಾ ತಾಲೂಕಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಎಲ್ಲರೊಳಗೊಂದಾಗಿ ದುಡಿಯುವ ವಿಶಾಲ ಹೃದಯವಂತರು. ಮಕ್ಕಳಾದ ಅದ್ವಿತ್, ಆರುಷರವರೊಂದಿಗೆ ತುಂಬು ಜೀವನ ನಡೆಸುತ್ತಿರುವ ಮಮತಾ ರಾಮಚಂದ್ರ ನಾಯ್ಕರವರು ನೂರ್ಕಲ ಬಾಳಿ ಬದುಕಲೆಂದು ಜಿಲ್ಲೆಯ ಸಮಸ್ತ ಗುರು, ಗುರುಮಾತೆಯ ಪರವಾಗಿ ಹಾರೈಸುತ್ತೇನೆ.

ಪಿ.ಆರ್.ನಾಯ್ಕ
ನಲಿ-ಕಲಿ ಶಿಕ್ಷಕ,ಹೊನ್ನಾವರ.

Exit mobile version