Site icon ಒಡನಾಡಿ

ಜೋಯಿಡಾ ಶಿಕ್ಷಕರ ಸಂಘಕ್ಕೆ ಐದು ಬಾರಿ ಅಧ್ಯಕ್ಷರಾಗಿ ದಾಖಲೆ ಬರೆದ ಯಶವಂತ ನಾಯ್ಕ

ಜೋಯಿಡಾ ತಾಲೂಕಿನ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಐದನೇ ಬಾರಿ ಆಯ್ಕೆಯಾಗಿರುವ ಯಶವಂತ ನಾಯ್ಕ, ಅತಿ ಹೆಚ್ಚು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಹೆಗ್ಗಳಿಕೆ ಮತ್ತು ದಾಖಲೆಗೆ ಪಾತ್ರರಾಗಿದ್ದಾರೆ.

ಮೂಲತಹ ಕುಮಟಾ ತಾಲೂಕಿನ ಬಾಡ ಗ್ರಾಮದವರಾದ ಯಶವಂತ‌ ನಾಯ್ಕ 1998 ರಲ್ಲಿ‌ ಜೋಯಿಡಾ ತಾಲೂಕಿನ ದೂಪೇವಾಡಿ‌ ಮರಾಠಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದಲೇ ಶಿಕ್ಷಕ ವೃತ್ತಿ ಆರಂಭಿಸಿದರು. ನಂತರ ಜೋಯಿಡಾ ಹಿ.ಪ್ರಾ.ಶಾಲೆ ನಾಗೋಡಾ, ಕಿ.ಪ್ರಾ.ಶಾಲೆ ನಗರಿ, ಕಿ.ಪ್ರಾ.ಶಾಲೆ ಸಂತ್ರಿ, ಕಿ.ಪ್ರಾ.ಶಾಲೆ ಮೇಸ್ತಬಿರೋಡಾ, ಹಿ.ಪ್ರಾ.ಶಾಲೆ ಕುಂಬಾರವಾಡ, ಹಾಗೇ ಈಗ ಮೂಲ ಶಾಲೆ ಸಂತ್ರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಜೋಯಿಡಾದ ಶಿಕ್ಷಕರ ಸಂಘಕ್ಕೆ 1998 ಕ್ಕಿಂತ ಮೊದಲು ಸ್ವಯಂ ಘೋಷಿತ ಸಂಘ, ಸ್ವಯಂ ಘೋಷಿತ ಅಧ್ಯಕ್ಷರು ಇರುತ್ತಿದ್ದರು. ಆದರೆ 2002 ರಲ್ಲಿ ಚುನಾವಣೆ ಮಾಡಿಯೇ ಆಯ್ಕೆ ಮಾಡಬೇಕೆಂದು ಯಶವಂತ ನಾಯ್ಕ ಪಟ್ಟು ಹಿಡಿದು ಕುಳಿತರು. ಆಗ ಅಂದು ಅಧಿಕಾರದಲ್ಲಿದ್ದ ಶಿಕ್ಷಕರ ಸಂಘದವರು ಯಶವಂತ ನಾಯ್ಕ‌ ಶಿಕ್ಷಕ ಸಂಘಟನೆಗೆ ಬಂದರೆ ತಮಗೆ ಕಷ್ಟ ಎಂದು ತಿಳಿದು, ಅವರನ್ನು ಜೋಯಿಡಾದಿಂದ ಕ್ಯಾಸಲರಾಕ್ ಮತ್ತು ಅನಮೋಡ ಕ್ಲಸ್ಟರನ ಸಿ.ಆರ್.ಪಿ ಆಗಿ ನಿಯೋಜನೆ ಮಾಡಿದರು. ಅದೇ ಸಮಯದಲ್ಲಿ ಗಣೇಶಗುಡಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಯಶವಂತ ನಾಯ್ಕ ‘ ಸ್ಥಯಂ ಘೋಷಿತ ಸಂಘ ಬೇಕೋ ಅಥವಾ ಚುನಾವಣೆ ಬೇಕೋ’ ಎಂದು ಶಿಕ್ಷಕರಲ್ಲಿ ಪ್ರಶ್ನಿಸಿದಾಗ ಎಲ್ಲಾ ಶಿಕ್ಷಕರು ಚುನಾವಣೆ ಬೇಕು ಅಂತ ಒಕ್ಕೊರಲಿನಿಂದ ಆಗ್ರಹಿಸಿದ್ದರು. ಅದೇ ವರ್ಷ ಚುನಾವಣೆ ನಡೆದು, ಯಶವಂತ‌ ನಾಯ್ಕ ಅತ್ಯಧಿಕ ಮತಗಳಿಂದ ಆಯ್ಕೆಯಾದರು. ಅಂದಿನಿಂದ ಇಂದಿನವರೆಗೂ ಚುನಾವಣೆ ನಡೆಯುತ್ತಿದ್ದು, ಯಶವಂತ ನಾಯ್ಕ ಐದನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ.

ಶಿಕ್ಷಕರ ಸಂಘದ ಜೊತೆಗೆ ಸರ್ಕಾರಿ ನೌಕರರ ಸಂಘಟನೆಯಲ್ಲಿಯೂ ಸಕ್ರೀಯರಾಗಿರುವ ನಾಯ್ಕರು ಐದನೇ ಬಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶಿಕ್ಷಕರ ಸಂಘದ ರಾಜ್ಯ ಘಟಕದ ನಾಮನಿರ್ದೇಶಿತ ರಾಜ್ಯ ಉಪಾಧ್ಯಕ್ಷರಾಗಿ ಎರಡು ಬಾರಿ, ಜಿಲ್ಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾಗಿ ಒಂದು ಬಾರಿ ಕಾರ್ಯನಿರ್ವಹಿಸಿರುವ ಇವರು ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ಜೋಯಿಡಾ ನಾಮಧಾರಿ ಸಂಘದ ಅಧ್ಯಕ್ಷ ರೂ ಆಗಿರುವ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ‌. ನಾಟಕ, ಯಕ್ಷಗಾನ ಕಲಾವಿದರೂ ಆಗಿರುವ ಇವರು ನಾಡು ನುಡಿ ಸಂಘಟನೆಯಲ್ಲಿ‌ ಮುಂಚೂಣಿಯಲ್ಲಿರುತ್ತಾರೆ. ಎಲ್ಲ ಸಮಾಜಮುಖಿ‌ ಸಂಘಟನೆಗಳ ಜೊತೆಗೆ ಶಿಕ್ಷಕ ವೃತ್ತಿಯನ್ನೂ ಸಹ ಅಷ್ಟೇ ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ಯಶವಂತ ನಾಯ್ಕ ವಿದ್ಯಾರ್ಥಿಗಳ ಅಚ್ಚು‌ಮೆಚ್ಚಿನ ಗುರುಗಳಾಗಿದ್ದಾರೆ.

ಜೋಯಿಡಾದಂತಹ ಗುಡ್ಡಗಾಡು ತಾಲೂಕಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುವುದೇ ಒಂದು ಸವಾಲು. ಅಂತಹ ಪ್ರದೇಶದಲ್ಲಿಯೂ ಕೆಲಸ ನಿರ್ವಹಿಸುವ ಶಿಕ್ಷಕರ ಕುಂದು ಕೊರತೆಗಳನ್ನು ಆಲಿಸುತ್ತ, ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರ ಶ್ರಮಿಸುತ್ತಿರುವ ಯಶವಂತ ನಾಯ್ಕ ಅಧಿಕಾರಿಗಳು ಮತ್ತು ಶಿಕ್ಷಕರ ನಡುವೆ ಸಮನ್ವಯತೆಯನ್ನು ಕಾದುಕೊಂಡಿದ್ದಾರೆ. ಐದು ಬಾರಿ ಜೋಯಿಡಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಯಶವಂತ‌ ನಾಯ್ಕರಿಗೆ ಹಲವರು ಅಭಿನಂದಿಸಿದ್ದಾರೆ.

Exit mobile version