Site icon ಒಡನಾಡಿ

ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಸಂಪಾದನೆಗೆ ಪತ್ರಿಕೆಗಳ ಓದು ಅವಶ್ಯ

ದಾಂಡೇಲಿಯಲ್ಲಿ ಪತ್ರಿಕಾ ದಿನಾಚರಣೆ: ಶ್ರಮ ಜೀವಿಗಳಿಗೆ ಸನ್ಮಾನ

ದಾಂಡೇಲಿ: ಇಂದು ಹಲವಾರು ಕಾರಣಗಳಿಗಾಗಿ ಪತ್ರಿಕೆ ಓದುವವರ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿದೆ. ಪಾಲಕರಾದವರು ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಸಂಪಾದನೆಗೆ ಪತ್ರಿಕೆಗಳ ಓದು ಅತಿ ಅವಶ್ಯವಾಗಿದೆ ಎಂದು ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ್ ನುಡಿದರು.

ಅವರು ವೆಷ್ಟಕೋಸ್ಟ ಪೇಪರ್ ಮಿಲ್ ನ ಡಿಲಕ್ಸ ಸಭಾಭವನದಲ್ಲಿ ದಾಂಡೇಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ (ದಾಂಡೇಲಿ ಪ್ರೆಸ್ ಕ್ಲಬ್) ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಶ್ರಮಜೀವಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸುದ್ದಿ ಮಾಡುವುದೊಂದೇ ಪತ್ರಕರ್ತನ ಕೆಲಸವಲ್ಲ. ಸುದ್ದಿಯ ಜೊತೆ ಸೌಲಭ್ಯ ಕೊಡಿಸುವ ಕೆಲಸವನ್ನು ಮಾಡಬೇಕು. ತಪ್ಪು ಮಾಡುವವರನ್ನು ಪರಿವರ್ತನೆ ಮಾಡುವ ಕೆಲಸ ಕೂಡ ಪತ್ರಕರ್ತನಿಂದ ಆಗಬೇಕು. ಆಗುತ್ತದೆ. ಎಂದರು

ಸದಾ ಅಭದ್ರತೆಯಲ್ಲಿ ಬದುಕುವ ಪತ್ರಕರ್ತರು ಬೆರೆಯವರ ಭದ್ರತೆಯ ಬಗ್ಗೆ ಕಾಳಜಿ ವಹಿಸಿ ಸುದ್ದಿ ಮಾಡುತ್ತಾರೆ. ಸಮಾಜದ ಡೊಂಕು ತಿದ್ದುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಪ್ರಸ್ತುತ ದಿನಮಾನದಲ್ಲಿ ಪತ್ರಿಕೆಯ ಉಳಿವಿಗಾಗಿ ಮನೆಗೊಂದು ಪತ್ರಿಕೆ ಅಭಿಯಾನದ ಜರೂರತ್ತಿದೆ. ಉಳಿದವರ ಖುಷಿಯಲ್ಲಿ ತನ್ನ ಖುಷಿಯನ್ನು ಕಾಣುವ ವರದಿಗಾರಿನಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವುದೇ ಸವಲತ್ತು ನೀಡದಿರುವುದು ಬೇಸರದ ಸಂಗತಿ ಎಂದು ಹೇಲಕಿ ದಾಂಡೇಲಿ ಪತ್ರಕರ್ತರು ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯ ವೈಶಿಷ್ಠ್ಯತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿದ್ದ ಪೌರಾಯುಕ್ತ ರಾಜಾರಾಮ ಪವಾರ ಸಮಾಜದಲ್ಲಿ ಪತ್ರಕರ್ತರ ಸ್ಥಾನ ಬಹಳ ಗೌರವಯುತವಾದುದು. ಆ ನಿಟ್ಟಿನಲ್ಲಿ ದಾಂಡೇಲಿ ಪತ್ರಕರ್ತರೂ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚೌವ್ಹಾಣ್ ಪತ್ರಿಕಾ ದಿನಾಚರಣೆಯ ಮಹತ್ವ ಹಾಗೂ ಹಿನ್ನೆಲೆ ಕುರಿತು ಹೇಳಿ ಪ್ರೆಸ್ ಕ್ಲಬ್ ನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಅರಕ್ಷಕ ವೃತ್ತ ನಿರೀಕ್ಷಕ ಭೀಮಣ್ಣ ಎಂ.ಸೂರಿ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ, ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ಸದಸ್ಯ ಯು.ಎಸ್. ಪಾಟೀಲ, ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮದಲ್ಲಿ ಕಳೆದ 21 ವರ್ಷಗಳಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇರವಾಡದಲ್ಲಿ ಬಿಸಿಯೂಟ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಲೀಲಾವತಿ ಪ್ರಹ್ಲಾದ ಕೊರಡೆ ಹಾಗೂ ವಿಶೇಷ ಚೇತನರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡು ಮಾದರಿಯಾಗಿರುವ ಮಾರುತಿನಗರದ ಎಜಾಜ್ ಅಹ್ಮದ್ ಎಂ. ಖಾನಪುರಿಯವರನ್ನ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೆಸ್ ಕ್ಲಬ್ ಅಧ್ಯಕ್ಷ ಸಂದೇಶ ಎಸ್. ಜೈನ್ ದಾಂಡೇಲಿ ಇದು ಎಲ್ಲರಿಗೂ ಬದುಕು ಕೊಡುವ ನೆಲ. ಇಲ್ಲಿಯ ಸೌಹಾರ್ದತೆ ಮಾದರಿಯಾದುದು ಎಂದು ಹೇಳಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರನ್ನು ಸ್ಮರಿಸಿದರು.

ಆರಂಭದಲ್ಲಿ ಮಾನಸಾ ವಾಸರೆ ಪ್ರಾರ್ಥಿಸಿದರು. ಬಿ.ಎನ್. ವಾಸರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಪತ್ರಕರ್ತರ ಸಂಘದ ಖಜಾಂಚಿ ಅಕ್ಷಯಗಿರಿ ಗೋಸಾವಿ, ಪ್ರವೀಣ ಸುಲಾಖೆ, ರಾಜೇಶ ತಳೇಕರ ಪರಿಚಯಿಸಿದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ವಂದಿಸಿದರು. ಯು.ಎಸ್. ಪಾಟೀಲ ನಿರೂಪಿಸಿದರು. ಕೃಷ್ಣಾ ಪಾಟೀಲ, ಅಪ್ತಾಪ ಶೇಖ್ ಸಹಕರಿಸಿದರು.

Exit mobile version