ಹೊಸದಿಲ್ಲಿ: ಬರ್ಮಿಂಗ್ ಹ್ಯಾಂನಲ್ಲಿ ನಡೆದ ವಿಶ್ವ ಲೆಜೆಂಡ್ ಚಾಂಪಿಯನ್‌ಶಿಪ್ ಟ್ರೋಫಿಯಲ್ಲಿ ಭಾರತದ ಚಾಂಪಿಯನ್ಸ್ ತಂಡವು ಪಾಕಿಸ್ತಾನದ ಚಾಂಪಿಯನ್ಸ್ ತಂಡವನ್ನು ಮಣಿಸುವ ಮೂಲಕ ವಿಶ್ವ ಲೆಜೆಂಡ್ ಚಾಂಪಿಯನ್‌ಶಿಪ್ ಅನ್ನು ಮುಡಿಗೇರಿಸಿಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಭಾರತದ ಬೌಲರ್ ಅನುರೀತ್ ಸಿಂಗ್ ಮೂರು ವಿಕೆಟ್ ಕಿತ್ತು, ಪಾಕಿಸ್ತಾನವನ್ನು ಕಡಿಮೆ ಸ್ಕೋರ್‌ಗೆ ಕಟ್ಟು ಹಾಕುವಲ್ಲಿ ಯಶಸ್ವಿಯಾದರು.
ನಂತರ ಬ್ಯಾಟಿಂಗ್‌ಗೆ ಇಳಿದ ಭಾರತ ತಂಡದ ರಾಬಿನ್ ಉತ್ತಪ್ಪ ಹಾಗೂ ಅಂಬಟಿ ರಾಯುಡು ಜೋಡಿಯು ಉತ್ತಮ ಆರಂಭವನ್ನು ನೀಡಿತಾದರೂ, ತಂಡದ ಮೊತ್ತ 34 ರನ್ ಆಗಿದ್ದಾಗ, ಪಾಕಿಸ್ತಾನದ ವೇಗದ ಬೌಲರ್ ಆಮೀರ್ ಯಾಮಿನ್ ರಾಬಿನ್ ಉತ್ತಪ್ಪ ವಿಕೆಟ್ ಕಬಳಿಸಿದರು. ನಂತರ ಅದೇ ಓವರ್‌ನಲ್ಲಿ ಎಡಗೈ ಬ್ಯಾಟರ್ ಸುರೇಶ್ ರೈನಾರ ವಿಕೆಟ್ ಅನ್ನೂ ಕಿತ್ತರು. ಆಗ ಭಾರತ ತಂಡದ ಮೊತ್ತ ಕೇವಲ 38 ರನ್ ಆಗತ್ತು.
ಈ ಹಂತದಲ್ಲಿ ಆರಂಭಿಕ ಬ್ಯಾಟರ್ ಅಂಬಟಿ ರಾಯುಡು ವೇಗದ ಅರ್ಧ ಶತಕ (50) ದಾಖಲಿಸಿದರು. ಅಲ್ಲದೆ ಮಧ್ಯಮ ಕ್ರಮಾಂಕದ ಬ್ಯಾಟರ್ ಗುರ್ಕೀರತ್ ಸಿಂಗ್ ಮಾನ್‌ರೊಂದಿಗೆ ಅಮೂಲ್ಯ 60 ರನ್‌ಗಳ ಜೊತೆಯಾಟವಾಡಿದರು.
ಆದರೆ, 12ನೆಯ ಓವರ್‌ನಲ್ಲಿ ಸಯೀದ್ ಅಜ್ಮಲ್ ಬೌಲಿಂಗ್‌ನಲ್ಲಿ ಅಂಬಟಿ ರಾಯುಡು ಹಾಗೂ ನಂತರದ ಶೋಯೆಬ್ ಮಲಿಕ್ ಓವರ್‌ನಲ್ಲಿ ಗುರ್ಕೀರತ್ ಮಾನ್ ತಮ್ಮ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಭಾರತ ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 108 ಆಗಿತ್ತು.
ಆಗ ಜೊತೆಗೂಡಿದ ಆಲ್‌ರೌಂಡರ್ ಯೂಸುಫ್ ಪಠಾಣ್ ಹಾಗೂ ತಂಡದ ನಾಯಕ ಯುವರಾಜ್ ಸಿಂಗ್ ಐದನೆ ವಿಕೆಟ್ ಜೊತೆಯಾಟದಲ್ಲಿ 42 ರನ್ ಪೇರಿಸುವ ಮೂಲಕ ಭಾರತ ತಂಡದ ಗೆಲುವನ್ನು ಖಾತರಿಗೊಳಿಸಿದರು. ಆಕ್ರಮಣಕಾರಿ ಆಟ ಪ್ರದರ್ಶಿಸಿದ ಯೂಸುಫ್ ಪಠಾಣ್ ಕೇವಲ 16 ಬಾಲ್‌ಗಳಲ್ಲಿ 30 ರನ್ ಸಿಡಿಸಿದರೆ, ತಾಳ್ಮೆಯ ಆಟವಾಡಿದ ಯುವರಾಜ್ ಸಿಂಗ್ 22 ಬಾಲ್‌ಗಳಲ್ಲಿ ಕೇವಲ 15 ರನ್ ಗಳಿಸಿ ಔಟಾಗದೆ ಉಳಿದರು. ಈ ಜೊತೆಯಾಟ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.