ತಮ್ಮ ವೃತ್ತಿ ಬದುಕಿನದ್ದಕ್ಕೂ ಸರಳತೆ ಮತ್ತು ಸೌಜನ್ಯತೆಯ ಮೂಲಕವೇ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಲ್ಲಿ ಮತ್ತು ಇಲಾಖೆಯಲ್ಲಿ ಪ್ರೀತಿ ಪಾತ್ರವಾಗಿರುವ ದಾಂಡೇಲಿಯ ಅಜಾದ್ ನಗರದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿ ಸರಸ್ವತಿ ಲಕ್ಕಲಕಟ್ಟಿ ಅಕ್ಟೋಬರ 31 ರಂದು ಸೇವಾ ನಿವೃತ್ತಿಗೊಂಡಿದ್ದಾರೆ.
1981 ರಲ್ಲಿ ಹಳಿಯಾಳದ ಕರ್ಲಕಟ್ಟಾ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಆರಂಭಿಸಿದ ಸರಸ್ವತಿ ಲಕಲಕಟ್ಟಿಯವರು 10 ವರ್ಷಗಳ ಕಾಲ ಅದೇ ಶಾಲೆಯಲ್ಲಿ ಕಾರ್ಯ ನಿರ್ವಹಿಸಿ ಜನಪ್ರೀತಿಗೆ ಪಾತ್ರರಾಗಿದ್ದರು. ನಂತರ ಹಳೇ ದಾಂಡೇಲಿಯ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು 16 ವರ್ಷಗಳ ಸುದೀರ್ಘ ಸೇವೆಯನ್ನ ಸಲ್ಲಿಸಿದ್ದಾರೆ. ಅಲ್ಲಿಂದ ದಾಂಡೇಲಿಯ ಆಜಾದ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಇವರು 15 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ತಾವು ಸೇವೆ ಸಲ್ಲಿಸಿದ ಪ್ರತಿಯೊಂದು ಶಾಲೆಗಳಲ್ಲಿ ತಮ್ಮ ಉತ್ತಮವಾದ ಪಾಠ ಬೋಧನೆ ಹಾಗೂ ಸರಳತೆಯ ಮೂಲಕ ವಿದ್ಯಾರ್ಥಿಗಳ ಹಾಗೂ ಪಾಲಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ವಿದ್ಯಾರ್ಥಿಗಳ ಪಾಠ ಶಿಕ್ಷಣಕ್ಕೆ ಮಹತ್ವ ನೀಡಿದ ಇವರು ಕಲಿಕೆಯ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ಹಾಗೂ ಕೌಶಲ್ಯ ಕೂಡ ಅವಶ್ಯ ಎನ್ನುತ್ತಾರೆ.
1991ರಲ್ಲಿ ಜನಗಣತಿಯಲ್ಲಿ ಕಾರ್ಯನಿರ್ವಹಿಸಿದ ಇವರು ಜಿಲ್ಲಾಮಟ್ಟದ ಉತ್ತಮ ಜನಗಣತಿಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ. 1998ರಲ್ಲಿ ಸಾಕ್ಷರತಾ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಡೈರೆಕ್ಟರ್ ಮಾಸ್ ಎಜುಕೇಶನ್ ಪ್ರಶಂಸನ ಪತ್ರವನ್ನು ಪಡೆದಿದ್ದಾರೆ. 2008 ರಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೂ ಭಾಜನರಾಗಿರುವ ಇವರು ಸಮಾಜ ಭೂಷಣ ಪ್ರಶಸ್ತಿ ಸಾಹಿತ್ಯ ಪರಿಷತ್ತಿನ ಗೌರವ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.
ಎಸ್. ಬಿ. ಐ. ಉದ್ಯೋಗಿಯಾಗಿರುವ ಬಿ. ಎಫ್. ರಾಠೋಡ್ ಇವರ ಪತಿಯಾಗಿದ್ದು ಸತಿಪತಿಗಳಿಬ್ಬರೂ ಸೇರಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಸೇವ ಕಾರ್ಯಗಳನ್ನು ಕೂಡ ಮಾಡುತ್ತಿದ್ದಾರೆ.
ಶಿಕ್ಷಕಿಯಾದವಳು ಶಾಲೆಯ ಸಮಯವಷ್ಟೇ ಶಿಕ್ಷಕಿಯಾಗಿದ್ದರೆ ಸಾಲದು, ಅವಳ ಬದುಕು ಪೂರ್ತಿ ಕಲಿಕೆ ಮತ್ತು ಕಲಿಸುವಿಕೆಯಲ್ಲಿಯೇ ಇರುತ್ತದೆ ಶಾಲೆಯ ಕೊಠಡಿಯೊಳಗಿನ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣುವ ಶಿಕ್ಷಕರು ನಿಜವಾದ ಶಿಕ್ಷಕರಾಗಿರುತ್ತಾರೆ ಎನ್ನುವ ಸರಸ್ವತಿಯವರು ತಮ್ಮ ಶೈಕ್ಷಣಿಕ ವ್ಯಕ್ತಿತ್ವವನ್ನು ಮಾದರಿಯನ್ನಾಗಿ ಬೇರೆಯವರಿಗೆ ತೋರಿಸಿಕೊಟ್ಟವರು. ಇಂತಹ ಆದರ್ಶ ಶಿಕ್ಷಕಿ ಸರ್ಕಾರದ ನಿಯಮದನ್ವಯ ಸೇವಾ ನಿವೃತ್ತಿಗೊಂಡಿದ್ದು , ಇವರ ನಿವೃತ್ತಿ ಜೀವನಕ್ಕೆ ಹಲವರು ಶುಭಕೋರಿದ್ದಾರೆ.