Site icon ಒಡನಾಡಿ

ಆದರ್ಶ ಶಿಕ್ಷಕ ನಾರಾಯಣ ಭಾಗವತರ ಮುಡಿಗೆ ರಾಷ್ಟ್ರ ಪ್ರಶಸ್ತಿಯ ಗರಿ

ಆದರ್ಶ ಶಿಕ್ಷಕ ನಾರಾಯಣ ಭಾಗವತರಿಗೆ ಪ್ರಸಕ್ತ ಸಾಲಿನ ರಾಷ್ಟ್ರ ಪ್ರಶಸ್ತಿಯ ಗೌರವ ಒಲಿದು ಬಂದಿದ್ದು, ಇದು ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯಾಗಿದೆ. ಈ ಸಂದರ್ಭದಲ್ಲಿ ನಾರಾಯಣ ಭಾಗವತರ ಬಗ್ಗೆ ಒಂದಿಷ್ಟು ತಿಳಿಯೋಣ…

ಮಕ್ಕಳೇ ದೇವರು. ಮಕ್ಕಳೆಂದರೆ ಸರ್ವಸ್ವ ಎಂದು ತಿಳಿದು, ಮಕ್ಕಳ ನಾಡಿ ಮಿಡಿತ ಅರಿತ ಪ್ರತಿಭಾವಂತ ಶಿಕ್ಷಕ ನಾರಾಯಣ ಭಾಗವತರು, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಂದಿಗೋಣದಲ್ಲಿ ಮೇ 16 ,1968 ರಲ್ಲಿ ಜನಿಸಿದರು. ಪ್ರಸ್ತುತ ಶಿರಸಿಯ ಶ್ರೀ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಎ., ಎಂ.ಇಡಿ. ಪದವೀಧರರಾಗಿರುವ ಇವರು ರಂಗ ಶಿಕ್ಷಣದಲ್ಲಿ ಡಿಪ್ಲೊಮಾ ಮಾಡಿದ್ದಾರೆ.

ಕತೆ, ಕವನ, ನಾಟಕ ರಚನೆ, ಚಿತ್ರಕಲೆ, ಸಂಗೀತ, ನಾಟಕ ನಿರ್ದೇಶನ ಮತ್ತು ಅಭಿನಯ, ಉಪನ್ಯಾಸ, ರಜಾಶಿಬಿರಗಳ ಸಂಘಟನೆ, ಪೇಪರ್ ಕ್ರಾಫ್ಟ್, ಹಾರ್ಮೋನಿಯಂ ವಾದನ, ನಾಟಕದ ವೇಷಭೂಷಣ ಮತ್ತು ವರ್ಣಾಲಂಕಾರ, ಯಕ್ಷಗಾನ, ಕರಕುಶಲ ಕಲೆ, ವಾಸ್ತು ಜ್ಞಾನ… ಹೀಗೆ ಬಹುಮುಖಿ ಪ್ರತಿಭೆಯ ಇವರು ಸದಾ ಹಸನ್ಮುಖಿಗಳು. ಸಮಭಾವ – ಸದ್ಭಾವದೊಂದಿಗೆ ಎಲ್ಲರೊಂದಿಗೆ ಬೆರೆಯುವ ಸ್ನೇಹಜೀವಿ.1

ಬದುಕಿನ ಒಂದು ಭಾಗವಾಗಿ ಶಿಕ್ಷಣ ಇಲಾಖೆಯಲ್ಲಿ ನಿರಂತರವಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿದು ದಣಿವರಿಯದೇ ಇಡೀ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿರುತ್ತಾರೆ.

ಬಹುತ್ವದ ನೆಲೆಯಲ್ಲಿ ತೆರೆದುಕೊಂಡ ಇವರಿಗೆ ಜನಗಣತಿಯ ಉತ್ತಮ ಕಾರ್ಯ ನಿರ್ವಹಣೆಗಾಗಿ ರಾಷ್ಟ್ರಪತಿಗಳ ಬೆಳ್ಳಿ ಪದಕ, ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ,ಅತ್ಯುತ್ತಮ ಮಕ್ಕಳ ನಾಟಕ ನಿರ್ದೇಶಕ ಪ್ರಶಸ್ತಿ, ಅತ್ಯುತ್ತಮ ನಟ, ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯಜ್ಞಾನ ಸಿಂಧು ಪ್ರಶಸ್ತಿ, ನೇಶನ್ ಬಿಲ್ಡರ್ ಪ್ರಶಸ್ತಿ, ಕಸಾಪ ತಾಲೂಕು ಪ್ರಶಸ್ತಿ, ರಾಜ್ಯ ಸಿರಿ ಕನ್ನಡ ನುಡಿ ಪ್ರಶಸ್ತಿ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ರಾಷ್ಟ್ರಮಟ್ಟದ ಉತ್ತಮ ನಾಟಕ ನಿರ್ದೇಶಕ ಪ್ರಶಸ್ತಿಯು ಸೇರಿದಂತೆ ಹತ್ತಾರು ಪ್ರಶಸ್ತಿಗಳು ಇವರ ಮುಡಿಗೇರಿದೆ. ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿದೆ. ನಾರಾಯಣ ಭಾಗವತರಿಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವುದು ಇಡೀ ಶಿಕ್ಷಕ ಸಮುದಾಯಕ್ಕೆ ಸಂದ ಗೌರವವಾಗಿದೆ.

ಆಳಾಗುವುದನ್ನು ಕಲಿ, ಆಗ ನಾಯಕನ ಅರ್ಹತೆ ಬರುತ್ತದೆ. ಒಂದು ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯ ಎಂಬ ಹಿರಿಯರ ಮಾತಿನಂತೆ ಯಾವ ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿ, ಕರ್ತವ್ಯ ದೇವರೆಂದು ನಂಬಿ ಮಕ್ಕಳ ಮನದಲ್ಲಿ ಶಾಶ್ವತವಾಗಿ ನೆಲೆ ನಿಂತು ಶಿಕ್ಷಕರಿಗೆ ಮಾದರಿಯಾದ ನಾರಾಯಣ ಭಾಗವತರಿಗೆ ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರ್ದಿಕ ಅಭಿನಂದನೆಗಳು.

ವರದಿ : ಪಿ.ಆರ್. ನಾಯ್ಕ, ಹೊಳೆಗದ್ದೆ

Exit mobile version