Site icon ಒಡನಾಡಿ

ವೆಸ್ಟ್‌ಕೋಸ್ಟ್‌ ಪೇಪರ್‌ ಮಿಲ್‌ ನಿಂದ 85 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್: ಜಿಲ್ಲಾ ಆರೋಗ್ಯಾಧಿಕಾರಿ ಪರಿಶೀಲನೆ

ಕೋವಿಡ್‌ ಕೇರ್‌ ಸೆಂಟರ್‌ ಪರಿಶೀಲಿಸುತ್ತಿರುವ ಅಧಿಕಾರಿಗಳು

ದಾಂಡೇಲಿಯ ಕಾಗದ ಕಂಪನಿಯ ಕ್ಯಾಂಪಸ್‍ನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ, ಸೋಂಕಿತರಿಗೆ ಚಿಕಿತ್ಸೆ ನೀಡುವ ಸದುದ್ದೇಶದಿಂದ ವೆಸ್ಟ್‍ಕೋಸ್ಟ್ ಪೇಪರ್ ಮಿಲ್‍ನವರು ತಮ್ಮ ಕಂಪನಿ ಸ್ವಾಮಿತ್ವದ ಬಂಗೂರನಗರ ಪದವಿ ಕಾಲೇಜಿನ ಮಹಿಳಾ ಹಾಸ್ಟೇಲ್‍ನಲ್ಲಿ 85 ಹಾಸಿಗೆಗಳ ಕೋವಿಡ್ ಕೇರ್ ಸೆಂಟರನ್ನು ಆರಂಭಿಸಲಿದ್ದಾರೆ.

ಶನಿವಾರ ತಹಶೀಲ್ದಾರ್ ಶೈಲೇಶ ಪರಮಾನಂದ, ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಕದಂ, ದಾಂಡೇಲಿ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಜೇಶ ಪ್ರಸಾದ ಜೊತೆಗೆ ಇಲ್ಲಿಗೆ ಬೇಟಿ ನೀಡಿದ್ದ ಜಿಲ್ಲಾ ಕುಟುಂಭ ಕಲ್ಯಾಣ ಹಾಗೂ ಆರೋಗ್ಯಾಧಿಕಾರಿ ಡಾ. ಶರದ್ ನಾಯಕರವರು ಕೋವಿಡ್ ಕೇರ್ ಸೆಂಟರ್ ಮಾಡಲು ಉದ್ದೇಶಿಸಿರುವ ಕಟ್ಟಡವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಹಾಗೂ ಸಂಜಯ ಹುಕ್ಕೇರಿಕರವರು ತಾವು ಕಂಪನಿಯಿಂದ ಮಾಡಲಿರುವ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು.

ಕೋವಿಡ್‌ ಸೆಂಟರ್‌ಗೆ ಬಳಕೆಯಾಗಿರುವ ಬಂಗೂನಗರ ಪದವಿ ಕಾಲೇಜಿನ ಹಾಸ್ಟೆಲ್

ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿಯವರು ಪತ್ರಿಕೆಗೆ ನೀಡಿದ ಮಾಹಿತಿಯಂತೆ, ಜಿಲ್ಲಾಧಿಕಾರಿಗಳು ಕಂಪನಿಯ ವತಿಯಿಂದ ಒಂದು ಕೋವಿಡ್ ಕೇರ್ ಸೆಂಟರ್ ಮಾಡಲು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ದಾಂಡೇಲಿಯ ನಮ್ಮ ಕಾರ್ಮಿಕರ ಹಾಗೂ ಜನರ ಅನುಕೂಲಕ್ಕಾಗಿ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನರವರ ಮಾರ್ಗದರ್ಶನದಂತೆ ಕಂಪನಿಯು ಈ ಸೇವಾ ಮಾಡುತ್ತಿದೆ. ಈ ಕೇರ್ ಸೆಂಟರೊಳಗೆ ಬಂದು ಹೋಗಲು ಕಾಲೇಜು ಪ್ರವೇಶ ದ್ವಾರದ ಹೊರತಾಗಿ ಬೇರೆಯ ರಸ್ತೆಯನ್ನೇ ಮಾಡಲಾಗಿದೆ. ಕಟ್ಟಡದೊಳಗೆ ಕೋವಿಡ್ ಕೇರ್ ಸೆಂಟರ್‍ಗೆ ಅವಶ್ಯವಾಗಿ ಬೇಕಾಗಿರುವ ಕಾಟ್, ಬೆಡ್‍ಗಳ ಜೊತೆಗೆ, ಶೌಚಾಲಯದ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ.
ಇನ್ನು ಇಲ್ಲಿ ದಾಖಲಾಗುವ ಕೊರೊನಾ ಪೆಷೆಂಟ್‍ಗಳಿಗೆ ಕಂಪನಿಯಿಂದಲೇ ಬಿಸಿ ನೀರು, ಊಟ, ಉಪಹಾರ ಹಾಗೂ ಇತರೆ ವ್ಯವಸ್ಥೆಗಳನ್ನು ನೀಡಲಾಗುತ್ತದೆ. ಔಷಧೋಪಚಾರವನ್ನು ಆರೋಗ್ಯ ಇಲಾಖೆಯಿಂದ ನೋಡಿಕೊಳ್ಳಲಾಗುತ್ತದೆ. ಇದು ನಮ್ಮ ಸಾಮಾಜಿಕ ಜವಾಬ್ದಾರಿ ಎಂದು ತಿಳಿದು ನಾವು ಕಂಪನಿಯಿಂದ ಮಾಡುತ್ತಿದ್ದೇವೆ. ಇದಕ್ಕೆ ಆಡಳಿತ ಹಾಗೂ ಇಲಾಖೆ ಸಹಕಾರ ನೀಡುತ್ತಿದೆ ಎಂದಿದ್ದಾರೆ.

ಕಾಗದ ಕಂಪನಿಯ ಕೋವಿಡ್‌ ಸೆಂಟರನ ಒಂದು ನೋಟ

ಈಗಾಗಲೇ ದಾಂಡೇಲಿಯ ಸರಕಾರಿ ಆಸ್ಪತ್ರೆ ಇ.ಎಸ್.ಐ. ಆಸ್ಪತ್ರೆ ಹೊರತು ಪಡಿಸಿ ಮುರಾರ್ಜಿ ಶಾಲೆಯ ಕಟ್ಟಡಗಳಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಾಗಿದ್ದು, ಇದು ಮತ್ತೊಂದು ಕೇರ್ ಸೆಂಟರ್ ಆಗಲಿದೆ. ಮುಂದೆ ಕೊರೊನಾ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾದರೆ ಎಂಬ ಮುಂಜಾಗೃತೆಯಿಂದ ಈ ಕೋವಿಡ್ ಕೇರ ಸೆಂಟರ್ ಪ್ರಾರಂಭಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರದ್ ನಾಯಕ ತಿಳಿಸಿದ್ದಾರೆ.

ಕಾರ್ಮಿಕರಿಗೆ ಮೊದಲ ಆದ್ಯತೆ
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಾಗದ ಕಂಪನಿಯವರು ಬಂಗೂರನಗರ ಕಾಲೇಜಿನ ಹಾಸ್ಟೇಲ್‍ನಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡುತ್ತಿದ್ದಾರೆ. ಇಲ್ಲಿ ಕಾಗದ ಕಂಪನಿಯ ಕಾರ್ಮಿಕರಿಗೆ ಮೊದಲ ಆದ್ಯತೆ. ನಂತರ ಸ್ಥಳಾವಕಾಶವಿದ್ದಾಗ ಸಾರ್ವಜನಿಕರಿಗೂ ಸಹ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಹಶೀಲ್ದಾರ ಶೈಲೇಶ ಪರಮಾನಂದ ತಿಳಿಸಿದ್ದಾರೆ.

ಉತ್ತಮ ವ್ಯವಸ್ಥೆ ಮಾಡುತ್ತಿದ್ದಾರೆ
ಕಾಗದ ಕಂಪನಿಯವರು ತಮ್ಮ ಕಾಲೇಜಿನ ಹಾಸ್ಟೇಲನಲ್ಲಿ 85 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಮಾಡುತ್ತಿದ್ದಾರೆ. ಸ್ಥಳೀಯ ವೈದ್ಯರು ಹಾಗೂ ಅಧಿಕಾರಿಗಳ ಜೊತೆ ಅಲ್ಲಿಗೆ ಬೇಟಿ ನೀಡಿ ಪರಿಶೀಲಿಸಿದ್ದೇನೆ. ಉತ್ತಮ ವ್ಯವಸ್ಥೆಯಾಗುತ್ತಿದೆ. ಏನೇನು ಮಾಡಬೇಕೆಂಬುದರ ಬಗ್ಗೆಯೂ ಕಂಪನಿಯವರುಗೂ, ಇಲಾಖೆಗೂ ನಿರ್ದೇಶನ ನೀಡಲಾಗಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಡಿ.ಎಚ್.ಓ. ಡಾ. ಶರದ್ ನಾಯಕ ತಿಳಿಸಿದ್ದಾರೆ.

Exit mobile version