ದಾಂಡೇಲಿ; ಜಿಲ್ಲೆಯ ಕೊರೊನಾ ಹೆಲ್ತ ಬುಲೆಟಿನ್‍ನಲ್ಲಿ ದಾಂಡೇಲಿಯ ಹೆಸರು ಹಳಿಯಾಳ ತಾಲೂಕಿನಲ್ಲಿ ಸೇರ್ಪಡೆಗೊಳ್ಳುತ್ತಿದ್ದು, ಅದನ್ನು ಪ್ರತ್ಯೇಕಿಸಿ ದಾಂಡೇಲಿ ತಾಲೂಕನ್ನೇ ಬೇರ್ಪಡಿಸಿ ನೀಡುವಂತೆ ಇಲಾಖಾ ಅಧಿಕಾರಿಗಳ ಹಾಗೂ ಜನರ ಮನವಿಯಿದೆ. ಮುಂದೆ ದಾಂಡೇಲಿಯ ಅಂಖ್ಯೆ ಸಂಖ್ಯೆನ್ನು ಹೆಲ್ತ ಬುಲೆಟಿನ್‍ನಲ್ಲಿ ಪ್ರತ್ಯೇಕಿಸಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದರು.
ದಾಂಡೇಲಿಯಲ್ಲಿ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಈ ಬಗ್ಗೆ ತಿಳಿಸಿದ ಅವರು ದಾಂಡೇಲಿ ಪ್ರತ್ಯೇಕ ತಾಲೂಕಾಗಿದ್ದರೂ ಕೊರೊನಾ ಹೆಲ್ತ ಬುಲೆಟಿನ್‍ನಲ್ಲಿ ಪಾಸಿಟಿವ್, ನೆಗೆಟಿವ್ ವರದಿಗಳು ಹಳಿಯಾಳ ತಾಲೂಕಿನಲ್ಲಿ ಕೆಲ ತಾಂತ್ರಿಕ ತೊಂದರೆಗಳಿಂದ ಸೇರಿಕೊಳ್ಳುತ್ತಿದ್ದವು. ಈ ಎರಡೂ ತಾಲೂಕಿಗೆ ಓರ್ವರೇ ತಾಲೂಕು ಆರೋಗ್ಯಾಧಕಾರಿಗಳಿದ್ದುದರಿಂದ (ಕೋಡ್ ಸಂಖ್ಯೆ) ಅದು ಹಾಗೆ ಆಗುತಿತ್ತು. ಈಬಗ್ಗೆ ಮಾದ್ಯಮದಲ್ಲಿಯೂ ಪ್ರಕಟವಾಗಿರುವುದನ್ನು ಗಮನಿಸಿದ್ದೇನೆ. ಇನ್ನು ಮುಂದೆ ದಾಂಡೇಲಿಯ ವರದಿಯನ್ನು ಪ್ರತ್ಯೇಕಿಸಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜೊತೆಗೆ ಇನ್ನು ಮುಂದೆ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಪಾಸಿಟಿವ್ ಆದವರ ಜೊತೆಗೆ ಗಂಟಲು ದ್ರವದ ಪರೀಕ್ಷೆಗೆ ಹೋದ ಸಂಖ್ಯೆಯಲ್ಲಿ ಎಷ್ಟು ಪಾಸಿಟಿವ್, ಎಷ್ಟು ನೆಗೆಟಿವ್ ವರದಿ ಬಂದಿದೆ ಎಂಬ ಮಾಹಿತಿ ನೀಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವದೆಂದರು.
ಒಡನಾಡಿ ಗಮನ ಸೆಳೆದಿತ್ತು: ಕಳೆದೆರಡು ದಿನಗಳ ಹಿಂದೆ ನಮ್ಮ ಒಡನಾಡಿ ಅಂತರ್ಜಾಲ ಪತ್ರಿಕೆ ‘ತಾಲೂಕಾಗಿ ಮೂರು ವರ್ಷ: ಹಳಿಯಾಳದಲ್ಲೇ ಸೇರಿಕೊಂಡಿರುವ ದಾಂಡೇಲಿ: ಕೊರೊನಾ ಹೆಲ್ತ ಬುಲೆಟಿನ್‍ನಲ್ಲಿಯೂ ಇದೇ ಆವಾಂತರ’ ಎಂಬ ಶಿರ್ಷಿಕೆಯಡಿ ಸಮಗ್ರ ವರದಿ ಪ್ರಕಟಿಸಿ ಗಮನಸೆಳೆದಿದ್ದುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.