ದಾಂಡೇಲಿ ತಾಲೂಕೆಂದು ಘೋಷಣೆಯಾಗಿ ಮೂರು ವರ್ಷಗಳೆ ಕಳೆದು ಹೋಗಿದ್ದರೂ ಕೆಲ ಸರಕಾರಿ ಕಡತ ಹಾಗೂ ಕಾರ್ಯಕ್ರಮಗಳಲ್ಲಿ ದಾಂಡೇಲಿ ಈಗಲೂ ಹಳಿಯಾಳದೊಳಗೇ ಸೇರಿಕೊಳ್ಳುತ್ತಿರುವುದು ವಿಪರ್ಯಾಸವೆನಿಸುತ್ತಿದೆ.
2017ರ ಮಾರ್ಚ 15ರಂದು ನಡೆದ ನಡೆದ ರಾಜ್ಯ ಬಜೆಟ್ ಅಧಿವೇಶನದಲ್ಲಿ ದಾಂಡೇಲಿ ನೂತನ ತಾಲೂಕಾಗಿ ಘೋಷಣೆಯಾಗಿತ್ತು. ಅಂದರೆ ಇಲ್ಲಿಗೆ ಸರಿಯಾಗಿ ಮೂರು ವರ್ಷ ಮೂರು ತಿಂಗಳು ಕಳೆಯಿತು. ಇದಾದ ನಂತರ ಕಂದಾಯ ಇಲಾಖೆ 2018ರ ಜನವರಿಯಿಂದ ಅನ್ವಯವಾಗುವಂತೆ ನೂತನ ತಾಲೂಕು ರಚನೆ ಮಾಡಲು ತಾತ್ವಿಕ ಆಡಳಿತಾತ್ಮಕ ಅನುಮೋದನೆಯನ್ನೂ ನೀಡಿತ್ತು. ನೂತನ ತಾಲೂಕಿಗೆ ಅವಶ್ಯವಿರುವ ಕಚೇರಿಯನ್ನು ತೆರೆಯಲು ತಗಲುವ ವೆಚ್ಚವನ್ನು 2017-18ನೇ ಆಯವ್ಯಯ ಲೆಕ್ಕ ಶೀರ್ಷಿಕೆಯಡಿ ಭರಿಸತಕ್ಕದ್ದು ಎಂದೂ ಕೂಡಾ ಅಂದೇ ನಿರ್ದೇಶಿಸಲಾಗಿತ್ತು. ಆದರೆ ತಹಶಿಲ್ದಾರ ಕಾರ್ಯಾಲಯ ಸೇರಿದಂತೆ ಕೆಲವೊಂದು ಕಚೇರಿಗಳನ್ನು ಹೊರತು ಪಡಿಸಿ ಒಂದು ತಾಲೂಕಿನಲ್ಲಿರಬೇಕಾದ ಹತ್ತಾರು ಪೂರ್ಣ ಪ್ರಮಾಣದ ಇಲಾಖಾ ಕಾರ್ಯಾಲಯಗಳು ದಾಂಡೇಲಿಗಿನ್ನೂ ಬಂದಿಲ್ಲ.
ತಹಶೀಲ್ದಾರರು ದಾಂಡೇಲಿಗೆ ಪ್ರರ್ಯೇಕವಾಗಿರುವರಾದರೂ ಇನ್ನು ಕೆಲ ಸರಕಾರಿ ಕಾರ್ಯಕ್ರಮಗಳು, ಆಮಂತ್ರಣ ಪತ್ರಿಕೆಗಳಳು ಹಾಗೂ ಇತರೆ ಕಡತಗಳಲ್ಲಿಯೂ ಸಹ ದಾಂಡೇಲಿಯನ್ನು ಅವಿಭಜಿತ ಹಳಿಯಳ ತಾಲೂಕಿನೊಳಗಡೆಯೇ ಸೇರಿಸಲಾಗುತ್ತಿದೆ. ಕೆಲವೊಂದು ಸರಕಾರಿ ಆದೇಶಗಳೂ ಸಹ ಹಳಿಯಾಳ ತಾಲೂಕೆಂದೇ ಪರಿಗಣಿಸಿ ದಾಂಡೇಲಿಗೆ ಬರುತ್ತಿವೆ. ಇವುಗಳನ್ನು ಸರಿಪಡಿಸುವುದಕ್ಕಾಗಿಯೇ ಮತ್ತೊಂದು ಹೋರಾಟಗಳು ನಡೆಯಬೇಕೇನೋ?
ಕೊರೊನಾ ಅಂಖ್ಯೆ ಸಂಖ್ಯೆಯೂ ಗೊಂದಲ: ಇದರ ಜೊತೆಗೆ ಇದೀಗ ಕೊರೊನಾ ಸೋಂಕಿತರ ವರದಿ ನೀಡುವ ಹೆಲ್ತ ಬುಲೆಟಿನ್‍ನಲ್ಲಿ ಕೂಡಾ ದಾಂಡೇಲಿ ತಾಲೂಕಿನ ಅಂಖ್ಯೆ ಸಂಖ್ಯೆಗಳೂ ಹಳಿಯಾಳದೊಳಗಡೆಯೇ ಸೇರಿಕೊಳ್ಳುತ್ತಿವೆ. ದಾಂಡೇಲಿಯಲ್ಲಿ 11 ಹಳಿಯಳದಲ್ಲಿ 10 ಪ್ರಕರಣಗಳಾದರೆ ಹೆಲ್ತ ಬುಲೆಟಿನ್‍ನಲ್ಲಿ ಈ ಎರಡೂ ಸೇರಿ ಹಳಿಯಾಳ ತಾಲೂಕಿನಲಿ 21 ಪಾಸಿಟಿವ್ ಪ್ರಕರಣ ಎಂದು ನಮೂದಿಸಲ್ಪಟ್ಟು ಬರುತ್ತಿದೆ. ಇದು ಸ್ಥಳೀಯ ಅಧಿಕಾರಿಗಳಿಗೂ ಸಮಸ್ಯೆಯಷ್ಟೇ ಅಲ್ಲದೇ ಜನರಿಗೂ ಗೊಂದಲವನ್ನುಂಟು ಮಾಡುತ್ತಿದೆ.
ಮೊನ್ನೆ ಮಂಗಳವಾರ ಬಂದ ಹೆಲ್ತ ಬುಲೆಟಿನ್‍ನಲ್ಲಿ ದಾಂಡೇಲಿಯಲ್ಲಿ ದೃಢವಾದ 22 ಕೊರೊನಾ ಪಾಸಿಟಿವ್ ಪ್ರಕರಣ ಗಳ ಸಂಖ್ಯೇ ದಾಖಲಗಿರಲಿಲ್ಲ. ಜಿಲ್ಲೆಯಲ್ಲಿ ಒಟ್ಟೂ ಸೋಂಕಿತ ಸಂಖ್ಯೆ ಕಡಿಮೆ ತೋರಿಸುತ್ತಿತ್ತು. ಒಂದಕ್ಕೊಂದು ತಾಳೆ ಬರುತ್ತಿರಲಿಲ್ಲ. ಆದರೆ ದಾಂಡೇಲಿಯು 22 ಸೋಂಕಿತ ಜನರ ಸಂಖ್ಯೆ ಬುಧವಾರದ ಹೆಲ್ತ ಬುಲೆಟಿನ್‍ನಲ್ಲಿ ಸೇರಿ ಬಂದಿದೆ. ಅದೂ ಕೂಡಾ ಹಳಿಯಾಳ ತಾಲೂಕಿನಲ್ಲಿ 37 ಜನರಿಗೆ ಸೋಂಕು ಎಂಬ ವರದಿ ಬಂದಿದೆ. (ಹಳಿಯಾಳದಲ್ಲಿ 37 ಪ್ರಕರಣಗಳು ಎಂಬ ಹೆಲ್ತ ಬುಲೆಟಿನ್ ವರದಿ ಹಾಗೂ ಕೆಲ ಸುದ್ದಿಗಳಿಂದಾಗಿ ಹಳಿಯಾಳದ ಜನರು ಒಂದಿಷ್ಟು ಹೊತ್ತು ದಂಗಾಗಿದ್ದರು.) ಅಸಲಿಗೆ ಹಳಿಯಾಳದಲ್ಲಿ ಬುಧವಾರ ಒಂದೇ ಒಂದು ಪಾಸಿಟಿವ್ ಪ್ರಕರಣಗಳು ಇರಲಿಲ್ಲ. ಮಂಗಳವಾರದ ದಾಂಡೇಲಿಯ 22, ಹಾಗೂ ಬುಧವಾರದ ದಾಂಡೇಲಿಯ 14 ಪ್ರಕರಣಗಳು ಸೇರಿ ಹಳಿಯಾಳದಲ್ಲಿ 37 ಪಾಸಿಟಿವ್ ಪ್ರಕರಣಗಳೆಂದು ಹೆಲ್ತ್ ಬುಲೆಟಿನ್‍ನಲ್ಲಿ ತೋರಿಸಲಾಗುತ್ತಿತ್ತು. ಆದರೆ ಇನ್ನೊಂದು ಪ್ರಕರಣ ಎಲ್ಲಿಯದ್ದು ಸೇರಿಕೊಂಡಿದೆ ಎಂಬುದು ತಿಳಿಯದಾಗಿತ್ತು.
ಜಿಲ್ಲಾಡಳಿತ ಕೂಡಾ ಮಾದ್ಯಮಗಳಿಗೆ ಬಿಡುಗಡೆ ಮಾಡುವಾಗ ಹಳಿಯಾಳ ತಾಲೂಕಿನ ಸೋಂಕಿತರ ಸಂಖ್ಯೆಯನ್ನು (ದಾಂಡೇಲಿಯದ್ದೂ ಸೇರಿಸಿ) ಬಿಡುಗಡೆ ಮಾಡುತ್ತಿದೆಯೇ ಹೊರತು, ಅದರಲ್ಲಿ ದಾಂಡೇಲಿಯನ್ನು ಪ್ರತ್ಯೇಕಿಸಿ ನೀಡುತ್ತಿಲ್ಲ. ಇದು ಮಾದ್ಯಮದವರಿಗಷ್ಟೇ ಅಲ್ಲ ಅಧಿಕಾರಿಗಳ ಹಾಗೂ ಸಾರ್ವಜನಿಕರ ಗೊಂದಲಕ್ಕೂ ಕಾರಣವಾಗುತ್ತಿದ್ದು, ಇನ್ನು ಮುಂದಾದರೂ ಜಿಲ್ಲಾಡಳಿತ ಜಿಲ್ಲೆಯ ಕೊರೊನಾ ಹೆಲ್ತ ಬುಲೆಟಿನ್ ನೀಡುವಾಗ ದಾಂಡೇಲಿ ತಾಲೂಕಿನ ಅಂಖ್ಯೆ ಸಂಖ್ಯೆಯನ್ನು ಹಳಿಯಾಳದಿಂದ ಪ್ರತ್ಯೇಕಿಸಿ ನೀಡಬೇಕೆಂಬುದು ಜನಾಗ್ರಹವಾಗಿದೆ.
ದಾಂಡೇಲಿಯ ವಿವರ ಪ್ರತ್ಯೇಕವಾಗಿರಲಿ
ದಾಂಡೇಲಿ ತಾಲೂಕಾಗಿ ಮೂರು ವರ್ಷವಾಗಿದೆ. ಇದಕ್ಕೆ ಒಂದು ಸ್ವತಂತ್ರವಾದ ತಾಲೂಕಿನ ಸ್ಥಾನ ಮಾನ ಇರುವಾಗಲೂ ಕೊರೊನಾದ ಹೆಲ್ತ್ ಬುಲೆಟಿನ್‍ನ ಅಂಖ್ಯೆ-ಸಂಖ್ಯೆ ಹಳಿಯಾಳ ತಾಲೂಕಿನ ಜೊತೆ ಸೇರಿ ಬರುವುದು ಸಮಂಜಸವಲ್ಲ. ಮಾದ್ಯಮದಲ್ಲಿಯೂ ಹೀಗೆಯೇ ಜಂಟಿಯಾಗಿ ಬರುತ್ತಿದೆ. ಅದರಿಂದ ಗೊಂದಲವಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಹೆಲ್ತ ಬುಲೆಟಿನ್‍ನಲ್ಲಿ ದಾಂಡೇಲಿ ತಾಲೂಕಿನ ಕೊರೊನಾ ಅಂಖ್ಯೆ ಸಂಖ್ಯೆಯನ್ನು ಪ್ರತ್ಯೇಕಿಸಿ ನೀಡಬೇಕೆಂಬುದು ನಗರ ಯೋಜನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬಾ ಮುಲ್ಲಾ ಮನವಿ ಮಾಡಿದ್ದಾರೆ.