ದಾಂಡೇಲಿ; ನಗರದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ಹೆಚ್ಚುತ್ತಿರುವುದರಿಂದ ಅದರ ನಿಯಂತ್ರಣಕ್ಕಾಗಿ, ನಗರದ ಹಿತದೃಷ್ಠಿಯಿಂದ ಏಳುದಿನಗಳ ಕಾಲ ಕಟ್ಟುನಿಟ್ಟಿನ ಲಾಕ್‍ಡೌನ್ ಮಾಡುವುದೊಳಿತು. ಅದಕ್ಕೆ ನಮ್ಮೆಲ್ಲರ ಸಹಕಾರವಿರುತ್ತದೆ ಎಂದು ನಗರಸಭೆಯ ಸರ್ವಪಕ್ಷದ ಸದಸ್ಯರು ಸಭೆ ಸೇರಿ ತಹಶೀಲ್ದಾರ ಹಾಗೂ ಪೌರಾಯುಕ್ತರನ್ನು ಒತ್ತಾಯಿಸಿದರು.
ತಹಶಿಲ್ದಾರ್ ಶೈಲೇಶ ಪರಮಾನಂದ, ಹಾಗೂ ಪೌರಾಯುಕ್ತ ಡಾ. ಸಯ್ಯದ್ ಜಾಹೇದ್ ಅಲಿ, ಪಿ.ಎಸ್.ಐ. ಹನ್ಮಂತ ಬಿರಾದರ ಯವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ನಗರಸಭೆಯ ಹಿರಿಯ ಸದಸ್ಯ ಆದಂ ದೇಸೂರ ಅವರು ದಾಂಡೇಲಿಯಲ್ಲಿ ಇಲ್ಲಿಯವರೆಗೂ ಸ್ಥಳೀಯ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನದಿಂದಾಗಿ ಕೊರೊನಾ ನಿಯಂತ್ರಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಲಾಗಿದೆ. ಹಾಗೆ ಕೆಲಸ ಮಾಡಿದವರೆಲ್ಲರಿಗೂ ಈ ಅಭಿನಂದನೆಗಳು. ಆದರೆ ಇತ್ತೀಚಿನ ಕೆಲ ದಿನಗಳಲ್ಲಿ ದಾಂಡೇಲಿಯೂ ಸಹ ಕೊರೊನಾ ಸೋಂಕು ವಿಪರೀತವಾಗಿ ಹರಡುತ್ತಿದೆ. ಈಗಾಗಲೇ 70ರ ಗಡಿ ದಾಟಿದೆ. ಇದು ನಗರದ ಜನರ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ನಗರದ ಹಿತ ದೃಷ್ಠಿಯಿಂದ ಜನರ ಅಗತ್ಯ ವಸ್ತುಗಳ ಖರೀದಿಗೆ ಎರಡು ದಿನದ ಅವಕಾಶ ನೀಡಿ, ಏಳು ದಿನಬಗಳ ಕಾಲ ಸಂಪೂರ್ಣವಾಗಿ ಕಟ್ಟುನಿಟ್ಟಿನ ಲಾಕ್‍ಡೌನ್ ಮಾಡುವುದೊಳಿತು. ಈ ಬಗ್ಗೆ ನಮ್ಮ ನಗರಸಬಾ ಸದಸ್ಯರೆಲ್ಲರ ಸಂಪೂರ್ಣ ಸಹಕಾರವಿರುತ್ತದೆ ಎಂದರು.
ನಗರಸಭಾ ಸದಸ್ಯ ನರೇಂದ್ರ ಚೌಹಾಣ ಮಾತನಾಡಿ ದಾಡೇಲಿಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಕಾಮಾಲೆಯೂ ಹರಡುತ್ತಿದೆ. ಜನ ಭಯಬೀತಗೊಂಡಿದ್ದಾರೆ. ಕೊರನಾ ನಿಯಂತ್ರಣಕ್ಕಾಗಿ ನಾವು ಸ್ವಯಂ ಪ್ರೇರಣೆಯಿಂದ ಲಾಕ್‍ಡೌನ್ ಮಡಬೇಕಾದ ಅನಿವಾರ್ಯತೆಯಿದೆ. ಏಳುದಿನಗಳ ಕಡ್ಡಾಯ ಲಾಕ್‍ಡೌನ್ ಮಾಡುವ ಜೊತೆಗೆ ಕೊರೊನಾ ಸೋಂಕಿತರ ಮನೆ ಹಾಗೂ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸೆನಿಟೈಸರ್ ಮಾಡಬೇಕು ಎಂದರು.
ನಗರಸಭಾ ಸದಸ್ಯ ಅಷ್ಪಾಕ ಶೇಖ ಮಾತನಾಡಿ ಅರ್ಧದಿನದ ಲಾಕ್‍ಡೌನ್ ಮಾಡುವುದರಿಂದ ಪ್ರಯೋಜನ ಕಾಣುವುದಿಲ್ಲ. ಜನರು ಅರ್ಧದಿನ ಲಾಕ್‍ಡೌನ್ ಇರುವುದರಿಂದ ಮುಂಜಾನೆಯ ಹೊತ್ತಲ್ಲಿ ಹೆಚ್ಚಾಗಿ ಗುಂಪಾಗಿ ಸೇರುತ್ತಿದ್ದಾರೆ. ಮಾರ್ಕಟ್ ರಶ್ ಆಗುತ್ತಿದೆ. ಇದರ ಬದಲಿಗೆ ಇಡೀ ದಿನ ಲಾಕ್‍ಡೌನ್ ಮಾಡುವುದೇ ಒಳ್ಳೆಯದು ಎಂದರು.
ನಗರಸಭಾ ಸದಸ್ಯ ಮೋಹನ ಹಲವಾಯಿ ಮಾತನಾಡಿ ಕೆಲ ಕೊರೊನಾ ಸೋಂಕಿತರ ಮನೆ ಹಾಗೂ ಪ್ರದೇಶಗಳಲ್ಲಿ ಸಮರ್ಪಕವಾಗಿ ಸೆನಿಟೈಸರ ಮಾಡುತ್ತಿಲ್ಲ ಎಂಬ ಆಕ್ಷೇಪವಿದೆ. ಇದು ಮುಂದೇ ಆಗಬಾರದು. ಒಂದು ವಾರ ಕಟ್ಟುನಿಟ್ಟಿನ ಲಾಕ್‍ಡೌನ್ ಮಾಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ತರಬೇಕೆಂದರು.
ನಗರಸಭಾ ಸದಸ್ಯರಾದ ದಶರಥ ಬಂಡಿವಡ್ಡರ, ಬುದ್ದಿವಂತಗೌಡಾ ಪಾಟೀಲ ಯಾಸ್ಮಿನ್ ಕಿತ್ತೂರ, ರೋಷನ್‍ಜಿತ್, ಮೌಲಾಲಿ ಮುಲ್ಲಾ, ಸಂಜಯ್ ನಂದ್ಯಾಳಕರ, ಅನಿಲ್ ನಾಯ್ಕರ, ಸರಸ್ವತಿ ರಜಪೂತ, ಆಸಿಪ್ ಮುಜಾವರ್ ಮುಂತಾದವರು ಮಾತನಾಡಿ ಒಂದು ವಾರದ ಲಾಕ್‍ಡೌನ್‍ಗೆ ಸಹಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶಲ್ದಾರ ಶೈಲೇಶ ಪರಮಾನಂದರವರು ಲಾಕ್‍ಡೌನ್‍ನ್ನು ನಾವು ಸರಕಾರದ ಆದೇಶವಿಲ್ಲದೇ ಮಾಡಲಾಗದು. ಅದು ನಮ್ಮ ಪರಿಮಿತಿಯಲ್ಲಿಯೂ ಇಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ, ಬೇರೆಲ್ಲೂ ಇಲ್ಲದ ವಾರದಲ್ಲಿ ಮೂರು ದಿನಗಳ ಸಂತೆ ದಾಂಡೇಲಿಯಲ್ಲಿ ನಡೆಯುತ್ತಿದೆ. ಮೊದಲು ಅದನ್ನು ಸರಿಪಡಿಸಬೇಕು. ಜನರೂ ಸಹ ಮುಜಾಗೃತೆ ವಹಿಸಬೇಕು ಎಂದರು.
ಪೌರಾಯುಕ್ತ ಡಾ, ಸಯ್ಯದ್ ಜಾಹೇದ್ ಅಲಿಯವರು ನಗರಾಡಳಿತದಿಂದ ಕೊರೊನಾ ಸೋಂಕಿತರ ಮನೆ ಹಾಗೂ ಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ವಿವರಿಸಿ, ಮುಂದೆ ಆಯಾ ವಾರ್ಡುಗಳ ಸದಸ್ಯರಿಗೆ ಕೊರೊನ ಪಾಸಿಟಿವ್ ಬಂದವರ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದೆಂದರು. ಎಲ್ಲಾ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.