Site icon ಒಡನಾಡಿ

ದಾಂಡೇಲಿಯಲ್ಲಿ ಶುಕ್ರವಾರ ಒಂದೇ ದಿನ 8 ಕೊರೊನಾ ಪಾಸಿಟಿವ್… ಇ.ಎಸ್‌.ಐ. ಆಸ್ಪತ್ರೆ ಸಿಬ್ಬಂದಿಗಳಲ್ಲಿಯೂ ಸೋಂಕು

ದಾಂಡೇಲಿ: ನಗರದಲ್ಲಿ ಶುಕ್ರವಾರ ಒಂದೇ ದಿನ ಎಂಟು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಿಂದ ದಾಂಡೇಲಿಗರು ಆತಂಕಕ್ಕೊಳಗಾಗುವಂತಾಗಿದೆ.

ಹುಬ್ಬಳ್ಳಿಯ ಎಸ್.ಡಿ.ಎಮ್. ಗೆ ಹೋಗಿ ಚಿಕಿತ್ಸೆ ಪಡೆದು ಬಂದು ಕೊರೊನಾ ಸೋಂಕಿಗೊಳಗಾಗಿ ಕಾರವಾರ ಕ್ರಿಮ್ಸ್ ಆಸ್ಪತ್ರೆ ಸೇರಿರುವ ಇಲ್ಲಿಯ ಬಸವೇಶ್ವರ ನಗರದ ಗರ್ಭಿಣಿಯ ಸಂಪರ್ಕದಲ್ಲಿದ್ದ ಆರು ಮಹಿಳೆಯರಲ್ಲಿ ಹಾಗೂ ಇಬ್ಬರು ಪುರುಷರಲ್ಲಿ ಸೇರಿ ಎಂಟು ಜನರಲ್ಲಿ ಶುಕ್ರವಾರ ಕೊರೊನಾ ಸೋಂಕು ದೃಢವಾಗಿದೆ.
ಸೋಂಕಿತ ಗರ್ಭಿಣಿ ಬಾಡಿಗೆಗಿದ್ದ ಮನೆಯ ಇಬ್ಬರು ಹಾಗೂ ಅಕ್ಕ, ಪಕ್ಕದ ಮನೆಯವರೂ ಸಹ ಈ ಸೋಂಕಿಗೊಳಗಾಗಿದ್ದಾರೆ. ಕೆಲ ಮಾಹಿತಿಯ ಪ್ರಕಾರ ಇ.ಎಸ್.ಐ. ಆಸ್ಪತ್ರೆಯ ಸಿಬ್ಬಂದಿಗಳೂ ಕೂಡಾ ಸೋಂಕಿಗೊಳಪಟ್ಟಿದ್ದಾರೆ. ಶುಕ್ರವಾರ ಬಂದ ವರದಿಯಲ್ಲಿ 82 ವರ್ಷದ ವೃದ್ದೆ 3 ವರ್ಷದ ಮಗು ಸೇರಿದಂತೆ 59, 26,40, 39. 32 ಹಾಗೂ 34 ವರ್ಷದವರಲ್ಲಿ ಸೋಂಕು ದೃಢವಾಗಿದೆ. ಈ ಸೋಂಕಿತರೆಲ್ಲರೂ ಕಳೆದ ನಾಲ್ಕು ದಿನಗಳಿಂದ ಹೋಂ ಕ್ವಾರೆಂಟೈನ್‍ಲ್ಲಿದ್ದವರಾಗಿದ್ದಾರೆ.

ಈ ಎಂಟು ಜನರಲ್ಲಿ ನಾಲ್ವರು ( ಓರ್ವ ಪುರುಷ, ಓರ್ವ ಮಗು, ಇಬ್ಬರು ಮಹಿಳೆಯರು) ಬಸವೇಶ್ವರ ನಗರದವರಾಗಿದ್ದು, ಉಳಿದಂತೆ ಟೌನ್‍ಶಿಪ್, ಹಳೆದಾಂಡೇಲಿ, ಬಾಂಬೇಚಾಳ, ಹಾಗೂ ಇ.ಎಸ್.ಐ ಕ್ವಾಟ್ರಸ್‍ನ ನಿವಾಸಿ (ಮಹಿಳೆಯರು) ಗಳಾಗಿದ್ದಾರೆಂಬ ಮಾಹಿತಿಯಿದೆ. ಇವರೆಲ್ಲರೂ ಇ.ಎಸ್ಐ. ಆಸ್ಪತ್ರೆಯ ಸಿಬ್ಬಂದಿಗಳೆಂಬ ಮಾಹಿತಿಯಿದೆ. ಆದರೆ ಸೋಂಕಿತ ಮಹಿಳೆಯ ಪತಿ ಮಗುವಿನ ಪರೀಕ್ಷಾ ವರದಿ ಈ ವರೆಗೂ ಬಂದಿಲ್ಲ ಎನ್ನುವುದೇ ವಿಶೇಷವಾಗಿದೆ.

ಬಸವೇಶ್ವರ ನಗರದ ಸೋಂಕಿತರ ಈ ಪ್ರದೇಶವನ್ನು ಸೀಲ್‍ಡೌನ್ ಮಾಡುವ ಸಾದ್ಯತೆಯಿದೆ. ಶುಕ್ರವಾರದ ಈ ಸೋಂಕಿತರ ಈ ವರದಿ ಬಸವೇಶ್ವರ ನಗರದ ಜನರಲ್ಲಿ ಆತಂಕ ಹೆಚ್ಚಿಸಿದೆ ಅಷ್ಟೇ ಅಲ್ಲ. ನಗರವನ್ನು ಬೆಚ್ಚಿಬೀಳಿಸಿದೆ. ಶುಕ್ರವಾರದ ಎಂಟು ಪ್ರಕರಣ ಸೇರಿ ದಾಂಡೇಲಿಯಲ್ಲಿ ಇಲ್ಲಿಯವರೆಗೂ 27 ಪ್ರಕರಣಗಳು ದಾಖಲಾದಂತಾಗಿದೆ.

ಹುಬ್ಬಳ್ಳಿಯಿಂದ ಬಂದ ಸೋಂಕು: ಸೋಂಕಿತ ಗರ್ಭಿಣಿ ಧಾರವಾಡದ ಎಸ್.ಡಿ.ಎಮ್. ಆಪತ್ರೆಗೆ ಹೋಗಿ ಬಂದಿರುವ ಮಾಹಿತಿಯಿದ್ದು, ಇದೀಗ ಧಾರವಡ-ಹುಬ್ಬಳ್ಳಿಯ ಸಂಪರ್ಕದಿಂದಾಗಿ ದಾಂಡೇಲಿಗೆ ಕೊರೊನಾ ಸೋಂಕು ಬಂದಂತಾಗಿದೆ. ವ್ಯಾಪಾರ ಹಾಗೂ ಇತರೆ ಕೆಲಸಗಳಿಗೆ ದಾಂಡೇಲಿಯಿಂದ ಸಾಕಷ್ಟು ಜನ ಹುಬ್ಬಳ್ಳಿ- ಧಾರವಾಡಕ್ಕೆ ಹೋಗಿ ಬರುತ್ತಿದ್ದು ಈ ಬಗ್ಗೆ ಜನರು ಕಾಳಜಿ ವಹಿಸಬೇಕಿದೆ. ಅಧಿಕಾರಿಗಳೂ ಸಹ ನಿಗಾ ವಹಿಸಬೇಕಿದೆ.


Exit mobile version