ದಾಂಡೇಲಿಯ ವಕೀಲನೋರ್ವನಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದು, ಆ ಸಂಬಂಧ ಆತ ಚಿಕಿತ್ಸೆ ಪಡೆದಿದ್ದ ನಗರದ ಖಾಸಗಿ ವೈದ್ಯರ ಕ್ಲಿನಿಕ್ ಹಾಗೂ ಮತ್ತೊಂದು ನರ್ಸಿಂಗ್ ಹೋಮ್ ನ್ನು ಸೀಲ್ ಡೌನ್ ಮಾಡಲಾಗಿದೆ.
ನಗರದ ಫೋರ್ಟಿಂಥ್ ಬ್ಲಾಕ್ ನಿವಾಸಿಯಾಗಿರುವ ನ್ಯಾಯವಾದಿಯೋರ್ವರು ಜ್ವರ ಬಂದು ಜೆ.ಎನ್ ರಸ್ತೆಯ ಖಾಸಗಿ ವೈದ್ಯರಲ್ಲಿ ಔಷಧೋಪಚಾರ ಪಡೆದುಕೊಳ್ಳುತ್ತಿದ್ದರು. ಜುಲೈ 6 ರಂದು ರೋಗ ಬಿಗಡಾಯಿಸಿದಾಗ ಖಾಸಗಿ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿ ಹುಬ್ಬಳ್ಳಿಗೆ ಶಿಪ್ಟ ಆಗಿದ್ದರು. ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇದು ಧಾರವಾಡ ಜಿಲ್ಲಾ ಹೆಲ್ತ ಬುಲೆಟಿನ್ ನಲ್ಲಿ ದೃಡವಾಗಿದೆ.
ನ್ಯಾಯವಾದಿಯಲ್ಲಿ ಕೊರೋನಾ ಸೊಂಕು ದೃಢವಾಗಿರುವ ಮಾಹಿತಿ ಬರುತ್ತಿದ್ದಂತೆಯೇ ನಗರದಲ್ಲಿ ಚಿಕಿತ್ಸೆ ಪಡೆದಿದ್ದ ಎರಡು ಖಾಸಗಿ ನರ್ಸಿಂಗ್ ಹೋಂ ಹಾಗೂ ಅದಕ್ಕೆ ಹತ್ತಿರವಿರುವ ಲ್ಯಾಬ್ ಮತ್ತು ಮೆಡಿಕಲ್ ಶಾಪ್ ಗಳನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಹಶೀಲ್ದಾರ ಶೈಲೇಶ ಪರಮಾನಂದ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಕದಂ ತಿಳಿಸಿದ್ದಾರೆ. ವಕೀಲನಲ್ಲಿ ಕೊರೊನಾ ಸೋಂಕು ದೃಢವಾದ ಸುದ್ದಿ ತಿಳಿಯುತ್ತಿದ್ದಂತೆಯೇ ಗುರುವಾರ ಸ್ಥಳೀಯ ನ್ಯಾಯವಾದಿಗಳು ಸ್ವಯಂ ಪ್ರೇರಣೆಯಿಂದ ನ್ಯಾಯಾಲಯ ಕಲಾಪ ಬಹಿಷ್ಕರಿಸಿದ್ದಾರೆ.
ಸೋಂಕಿತ ನ್ಯಾಯವಾದಿಯ ಸಂಪರ್ಕದಲ್ಲಿದ್ದವರನ್ನು, ಹಾಗು ಚಿಕಿತ್ಸೆ ನೀಡಿದ ವೈದ್ಯರು ಮತ್ತು ನರ್ಸಗಳನ್ನು ಕ್ವಾರೆಂಟೈನಗೆ ಒಳಪಡಿಸಿದ್ದಾರೆ. ನ್ಯಾಯವಾದಿಯ ಈ ಸೋಂಕಿನ ಪ್ರಕರಣ ನಗರದಲ್ಲಿ ಆತಂಕ ಮೂಡಿಸಿದೆ.