ಮನುಷ್ಯ ಒಬ್ಬಂಟಿಯಿರುವಾಗ ಒಂದು ಕರಡಿ ದಾಳಿ ನಡೆಸಿದರೇ ಬದುಕುಳಿಯುವುದು ಕಷ್ಟ. ಅಂತದ್ದರಲ್ಲಿ ಒಂದಲ್ಲ, ಎರಡಲ್ಲ, ಮೂರು ಕರಡಿಗಳು ಜೊತೆಯಾಗಿ ದಾಳಿ ನಡೆಸಿದ ಸಂದರ್ಭದಲ್ಲಿಯೂ ಅವುಗಳೊಂದಿಗೆ ದೈರ್ಯದಿಂದ ಗುದ್ದಾಡಿ ಗೆದ್ದು ಬಂದ ವ್ಯಕ್ತಿಯೊಬ್ಬನಿದ್ದಾನೆ. ಅವರೇ ದಾಂಡೇಲಿ ಟಿ.ವಿ.ಎಸ್. ಷೋರೂಮ್‍ನ ಮಾಲಕ, ಕುಳಗಿಯ ನಿವಾಸಿ ಟಿ.ಎಸ್. ಬಾಲಮಣಿ ಅಲಿಯಾಸ ಬೇಟಾ…
ನಡೆದಿದ್ದೇನು?: : ದಾಂಡೇಲಿಯಿಂದ 12 ಕಿ.ಮಿ. ದೂರದಲ್ಲಿರುವ ಕುಳಗಿಯ ನಿವಾಸಿ ಟಿ.ಎಸ್. ಬಾಲಮಣಿಯವರು ಎಂದಿನಂತೆ ಮುಂಜಾನೆಯ ವಾಯುವಿಹಾರಕ್ಕೆಂದು (ಕುಳಗಿ-ಅಂಬಿಕಾನಗರ ಮಾರ್ಗದಲ್ಲಿ) ಹೊರಟಿದ್ದರು. ಮನೆಯಿಂದ ಎರಡು ಕಿ. ಮಿ ದೂರದಲ್ಲಿ ನಡೆಯುತ್ತಿರುವಾಗ ರಸ್ತೆಯ ಪೊದೆಯೊಂದರಿಂದ ಒಮ್ಮೆಲೆ ಹೊರ ಬಂದ ಮೂರು ಕರಡಿಗಳು ಬಾಲಮಣಿಯವರ ಮೇಲೆರಗಿದವು. ಹಠಾತ್ ದಾಳಿಯಿಂದ ವಿಚಲಿತನಾದ ಬಾಲಮಣಿಯವರು ಏಣು ಮಾಡಬೇಕೆಂದು ತೋಚದೇ ಮನುಷ್ಯರ ಜೊತೆ ಗುದ್ದಾಡುವಂತೆ ಕರಡಿಗಳ ಜೊತೆ ಗುದ್ದಾಡಿದರು. ಮೂರು ಕರಡಿಗಳ ದಾಳಿಯಿಂದ ತಪ್ಪಿಸಿಕೊಂಡು ಹೊರ ಬರಲಾಗದ ಅವರು ರಸ್ತೆಯ ಮೇಲೆ ಬಿದ್ದು ಬಿಟ್ಡರು. ಆಗ ಒಂದು ಕರಡಿ ಅವರ ಬಲ ತೊಡೆ ಭಾಗದಲ್ಲಿ ಕಚ್ಚಿಬಿಟ್ಟಿತ್ತು. ಮಯ್ಯೊಳಗಿದ್ದ ಶಕ್ತಿಯನ್ನೆಲ್ಲಾ ಒಂದು ಮಾಡಿ ಆ ಕರಡಿಯ ಮುಖದ ಮೇಲೆ ಮುಷ್ಠಿಯಿಂದ ಹೊಡೆದಾಗ ಕರಡಿ ತನ್ನ ಹಿಡಿತ ಬಿಟ್ಟಿತ್ತು.
ಜೋರಾಗಿ ಕೂಗಲಾರಂಭಿಸಿದರಾದರೂ ರಸ್ತೆಯಲ್ಲಿ ಬೇರೆಯಾರ ಸುಳಿವಿರಲಿಲ್ಲ. ಹಾಗೂ ಹೀಗೂ ಸೆಣೆಸಾಡಿದ ಬಾಲಮಣಿಯವರು ತಮ್ಮ ಕಾಲಿನ ಒದೆತ ಹಾಗೂ ಮುಷ್ಠಿಯ ಪ್ರಹಾರದಿಂದಲೇ ಕರಡಿಗಳನ್ನು ದೂರ ತಳ್ಳಿ ಮನೆಯ ಕಡೆ ಓಡಲಾರಂಬಿಸಿದರು. ಆಗಲೂ ಆ ಕರಡಿಗಳು ಅವರ ಬೆನ್ನು ಹತ್ತಿ ಓಡಿಸಿಕೊಂಡು ಬಂದವು. ಮನೆಯೊಳಗಡೆ ಬಂದು ಸೇರಿದಾಗಲೇ ಬಾಲಮಣಿ ಬಚಾವ್ ಆಗಿದ್ದು.
ಬಲ ತೊಡೆಯ ಬಾಗ, ಎರಡೂ ಕಾಲಿನ ಮಂಡಿ, ಮೊಣ ಕೈ, ಎದೆ ಹಾಗೂ ದೇಹದ ಇತರೆ ಭಾಗ ಕರಡಿಗಳು ಪರಚಿದ ಗಾಯಗಳಾಗಿದ್ದು, ತಕ್ಷಣ ಬಾಲಮಣಿಯವರು ದಾಂಡೇಲಿಗಾಗಮಿಸಿ ಖಾಸಗಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ. ಕೊನೆಗೂ ಮೂರು ಕರಡಿಗಳಿಂದ ಗುದ್ದಾಡಿ ಗೆದ್ದು ಬಂದ ‘ಬೇಟಾ’ ಇದೀಗ ಎಲ್ಲಡೆ ಸುದ್ದಿಯಾಗಿದ್ದಾರೆ.
ನಾನು ಸತ್ತೆನೆಂದೇ ಭಾವಿಸಿದ್ದೆ…
ಮೂರು ಕರಡಿಗಳು ಒಮ್ಮೆಲೇ ನನ್ನ ಮೇಲೆರಗಿದಾಗ ನಾನು ಕಂಗಾಲಾದೆ. ಏನು ಮಾಡಬೇಕೆಂದು ತೋಚದೇ ಗುದ್ದಾಡಲಾರಂಬಿಸಿದೆ. ಅವು ನನ್ನನ್ನು ನೆಲದ ಮೇಲೆ ಕೆಡಹಿದಾಗ ನಾನು ಇನ್ನು ಬದುಕುಳಿಯಲಾರೆ, ನಾನು ಸತ್ತೆನೆಂದೇ ಭಾವಿಸಿದ್ದೆ. ಹಾಗೂ ಹೀಗೂ ಮುಷ್ಠಿಯಿಂದ ಹೊಡೆದು, ಕಾಲಿನಿಂದ ಒದ್ದು ತಪಿಸಿಕೊಂಡು ಓಡಿ ಬಂದು ಬಚಾವಾಗಿದ್ದೇನೆ. ದೇವರೇ ನನ್ನನ್ನು ರಕ್ಷಿಸಿದ್ದಾನೆ. ನಮ್ಮ ಈ ಭಾಗದಲ್ಲಿ ಕರಡಿ ಹಾವಳಿ ಹೆಚ್ಚಿದ್ದು, ಇದರ ನಿಯಂತ್ರಣ ಮಾಡುವಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಕರಡಿ ದಾಳಿಗೊಳಗಾದ ಟಿ.ಎಸ್. ಬಾಲಮಣಿ (ಬೇಟಾ)
ಅದು ವನ್ಯಪ್ರಾಣಿಗಳಿರುವ ಪ್ರದೇಶ …
ಕರಡಿದಾಳಿಗೊಳಗಾದ ಟಿ.ಎಸ್. ಬಾಲಮಣಿಯವರ ಮನೆಗೆ ಬೀಟಿ ನೀಡಿ ಮಾಹಿತಿ ಪಡೆದಿದ್ದೇನೆ. ಅವರಿಗೆ ಕರಡಿ ದಾಳಿ ನಡೆಸಿದ ಸ್ಥಳ ಅದು ಕರಡಿಯೂ ಸೇರಿದಂತೆತೆ ವನ್ಯ ಪ್ರಾಣಿಗಳು ಹೆಚ್ಚಾಗಿ ಓಡಾಡುವ ಸ್ಥಳ. ಕರಡಿ ದಾಳಿ ಅಪಾಯಕಾರಿ ಕೂಡಾ. ಅವರ ವಯಕ್ತಿಕ ರಕ್ಷಣಾ ಕೌಶಲ್ಯದಿಂದ ಅವರು ಬಚಾವಾಗಿ ಬಂದಿದ್ದಾರೆ. ಕರಡಿಗಳ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾಋಎ ದಾಂಡೇಲಿ ವನ್ಯಜೀವಿ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಗೊರವರವರು.
- ಬಿ.ಎನ್. ವಾಸರೆ