ದಾಂಡೇಲಿ: ಲೆಪ್ಟಿನಂಟ್ ಕರ್ನಲ್ ಹುದ್ದೆಗೆ ಆಯ್ಕೆಯಾಗಿರುವ ದಾಂಡೇಲಿ ಗ್ರಾಮೀಣ ಠಾಣಾ ವ್ಯಾಪ್ತಿಯ ಹಳಿಯಾಳ ತಾಲೂಕಿನ ಹಂದಲಿ ಗ್ರಾಮದ ಪ್ರಕಾಶ ಮಾರುತಿ ಶಿಡ್ಲಾಣಿ ಇವರನ್ನು ಗ್ರಾಮೀಣ ಠಾಣೆಯಲ್ಲಿ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿ ಸನ್ಮಾನಿಸಿ ಗೌರವಿಸಿದರು.
ಇವರೊಂದಿಗೆ ಇಂಡಿಯನ್ ಆರ್ಮಿಗೆ ಆಯ್ಕೆಯಾಗಿರುವ ಹಂದಲಿ ಗ್ರಾಮದ ಮತ್ತೊಬ್ಬ ಯುವಕ ಮಾರುತಿ ಪಾವಲೆ ರವರನ್ನೂ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ ಶಿಡ್ಲಾನಿರವರು ಇದು ನನ್ನ ಬದುಕಿನ ಸಂತೋಷ್ ಕ್ಷಣವಾಗಿದೆ. ಇದರಿಂದ ನನ್ನ ಆತ್ಮ ಸ್ಥೈರ್ಯ ಹೆಚ್ಚಾಗಿದೆ. ಇನ್ನೂ ಉನ್ನತ ಹುದ್ದೆಗೆ ಏರುವ ಕನಸು ಕಾಣುವಂತಾಗಿದೆ. ಸೈನಿಕರು ದೇಶಕ್ಕಾಗಿ ವೀರಮರಣವನ್ನಿಪ್ಪಿದಾಗ ತೋರುವ ಗೌರವ, ಭಕ್ತಿಗಿಂತ ಅವರು ಸೇವೆಯಲ್ಲಿರುವಾಗಲೇ ಈ ರೀತಿಯ ಗೌರವಸಲ್ಲಿಸುವುದರಿಂದ ಸೈನಿಕರಿಗೂ ಆತ್ಮ ಸ್ಥೈರ್ಯ ಹೆಚ್ಚಾಗು ವದರೊಂದಿಗೆ ಯುವ ಪ್ರತಿಭೆಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ದೇಶ ರಕ್ಷಣೆಗೆ ಮುಂದಾಗಲಿದ್ದಾರೆ. ಈ ಕಾರ್ಯಕ್ಕೆ ದಾಂಡೇಲಿ ಗ್ರಾಮೀಣ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಮಾದರಿಯಾಗಿದ್ದಾರೆ ಎಂದರು.
ದಾಂಡೇಲಿ ಗ್ರಾಮೀಣ ಠಾಣೆಯ ಪಿ.ಎಸ್.ಐ. ಹನಮಂತ ಬಿರಾದಾರವರು ಅಭಿನಂದಿಸಿ ಮಾತನಾಡಿದರು. ಸೇನೆಯಲ್ಲಿ ಕಾರ್ಯ ನಿರ್ವಹಿಸುವುದು ಪುಣ್ಯದ ಕಾರ್ಯ. ಹಾಗೂ ನಿಜವಾದ ದೇಶ ಸೇವೆಯ ಕಾರ್ಯ ಎಂದರು. ಹಂದಲಿ ಬೀಟ ಉಸ್ತುವಾರಿ ಅಧಿಕಾರಿ ವೆಂಕಟೇಶ ತೆಗ್ಗಿನ, ಬೀಟ ಸಿಬ್ಬಂದಿ ರುಬಿನಾ ಹಾಗೂ ಠಾಣೆಯ ಇನ್ನಿತರ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹಳಿಯಾಳ ತಾಲೂಕಿನ ಮಂಗಳವಾಡ ಗ್ರಾಮದವರಾಗಿರುವ ಪ್ರಕಾಶ ಮಾರುತಿ ಶಿಡ್ಲಾಣಿರವರು ತಮ್ಮ ಪ್ರಾಥಮಿಕ ಶಿಕ್ಷಣ ಹಾಗೂ ಪಿ.ಯು.ಸಿ. (ಸಾಯಿನ್ಸ್) ಶಿಕ್ಷಣವನ್ನು ಹಳಿಯಾಳದ ಕೆ.ಎಲ್.ಎಸ್. ಪಿ.ಯು. ಕಾಲೇಜಿನಲ್ಲಿ ಪೂರೈಸಿ, 2011 ರಲ್ಲಿ ಭಾರತೀಯ ಭೂ ಸೇನೆಗೆ ಸೇರಿದವರು, ಆರ್ಮಿ ಮೆಡಿಕಲ್ ಕೋಪ್ರ್ಸನಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ 5 ವರ್ಷ ಸೇವೆ ಸಲ್ಲಿಸುತ್ತಿರುವ ವೇಳೆ 2016 ರಲ್ಲಿ ಸರ್ವಿಸ್ ಸೆಲೆಕ್ಷನ್ ಬೋರ್ಡ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರು ನಂತರ ಆರ್ಮಿ ಕೆಡೆಟ್ ಕಾಲೇಜು ಡೆಹರಾಡೂನ್‍ನಲ್ಲಿ 3 ವರ್ಷ ಪದವಿ ಹಾಗೂ 1 ವರ್ಷ ತರಬೇತಿಯನ್ನು ಮುಗಿಸಿ, ಜೂನ್ 17 ರಿಂದ 25 ದಿವಸಗಳ ರಜೆಯ ಮೇಲೆ ಹಂದಲಿ ಗ್ರಾಮಕ್ಕೆ ಆಗಮಿಸಿರುತ್ತಾರೆ.