ದಾಂಡೇಲಿ: ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸುವುದು ಅನಿವಾರ್ಯ. ಅದಕ್ಕೆ ಸರಕಾರದ ನಿರ್ದೇಶನ ಕೂಡಾ ಇದೆ. ಕೊರೊನಾ ವೈರಸ್‍ನ ಎಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಡೆಸಲಾಗುವುದು ಎಂದು ಹಳಿಯಾಳ-ದಾಂಡೇಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹ್ಮದ್ ಮುಲ್ಲಾ ತಿಳಿಸಿದರು.
ಅವರು ದಾಂಡೇಲಿ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಜೂನ 25 ರಂದು ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡುತ್ತಿದ್ದರು. ದಾಂಡೇಲಿಯಲ್ಲಿ ಸೆಂಟ್ ಮೈಕಲ್ ಪ್ರಾಥಮಿಕ ಶಾಲೆ, ಜನತಾ ವಿದ್ಯಾಲಯ ಹಾಗೂ ಬಂಗೂರನಗರ ಪದವಿ ಪೂರ್ವ ಕಾಲೇಜುಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳು ನಡೆಯಲಿದ್ದು, ವಿದ್ಯರ್ಥಿಗಳಲ್ಲಿ ಸೋಂಕು ಹರಡದಂತೆ ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸೆನಿಟೈಸ್ ಮಾಡಬೇಕು. ಜೊತೆಗೆ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ. ಪ್ರತೀ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನ್ ಮೂಲಕ ಆರೋಗ್ಯ ಪರೀಕ್ಷೆಗೊಳಪಡಿಸಲಾಗುವುದು. ಸಿಬ್ಬಂದಿಗಳಿಗೂ ಅವಶ್ಯ ಮುಂಜಾಗರೂಕತಾ ಕ್ರಮ ವಹಿಸಲಾಗುವುದು ಎಂದರು.
ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಬಸ್ಸಿನ ವ್ಯವಸ್ಥೆ, ವಿದ್ಯುತ್ ವ್ಯತ್ಯಯವಾಗದಂತೆ, ಹಾಗೂ ಬಂದು ಹೋಗುವ ವಿದ್ಯಾರ್ಥಿಗಳಿಗೆ ಯಶವುದೇ ಸಮಸ್ಯೆಯಾದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸಂಬಂದಪಟ್ಟ ಇಲಾಖಾ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು. ನಗರಸಭೆಯಿಂದ ಸೆನಿಟೈಸ್ ಮಾಡುವುದಾಗಿ ಒಪ್ಪಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಶೈಲೇಶ ಪರಮಾನಂದರವರು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಪೌರಾಯುಕ್ತ ಡಾ. ಸಯ್ಯದ್ ಜಾಹೇದ ಅಲಿ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಗಸ್ತಿ ಉಪಸ್ಥಿತರಿದ್ದರು. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಾದ ಸಿಸ್ಟರ್ ರೆನಿಟಾ, ಅಂಜಲಿ ಶಹಪುರ, ನಾಗರಾಜ, ಹೆಸ್ಕಾಂ ಅಧಿಕಾರಿ ಪುರುಷೋತ್ತಮ ಮಲ್ಯ, ಹಾಗೂ ಕೆ.ಎಸ್.ಆರ್.ಟಿ.ಸಿ ಮತ್ತು ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.