ದಾಂಡೇಲಿ: ಲಾಕ್‍ಡೌನ್ ಅವಧಿಯಲ್ಲಿ ವೆಸ್ಟ್‍ಕೋಸ್ಟ್ ಪೇಪರ್ ಮಿಲ್ ಆಡಳಿತ ಮಂಡಳಿ ಕೈಗೊಂಡ ಕೆಲ ನಿರ್ಧಾರಗಳನ್ನು ವಿರೋಧಿಸಿ, ಹಾಗೂ ಕೆಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕರ ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ಗುರುವಾರ ಕಂಪನಿಯ ಪ್ರಮುಖ ಪ್ರವೇಶ ದ್ವಾರದೆದುರು ಧರಣಿ ಸತ್ಯಾಗ್ರಹ ನಡೆಯಿತು.
ಕಂಪನಿಯವರು ಮೇ 18 ರಿಂದ 31 ರವರೆಗೆ ಕೆಲಸಕ್ಕೆ ಬಾರದ ಕಾರ್ಮಿಕರಿಗೆ ವೇತನ ನೀಡಿಲ್ಲ. ಕೆಲ ಖಾಯಂ ಕಾರ್ಮಿಕರಿಗೆ ಕೆಲಸ ನೀಡಿರಲಿಲ್ಲ ಎಂಬ ಆಕ್ಷೇಪ ಧರಣಿ ನಿರತದಾಗಿತ್ತು. ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಎಸ್.ಎನ್. ಪಾಟೀಲ ಹಾಗೂ ಮತ್ತಿತರ ಅಧಿಕಾರಿಗಳು ಧರಣಿ ನಿರತ ಮುಖಂಡÀರೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಭರವಸೆಯ ಲಿಖಿತ ಒಪ್ಪಂದ ಪಡೆದ ನಂತರ ಧರಣಿಯನ್ನು ಕೈಬಿಡಲಾಯಿತು.
ಈ ಸಂದರ್ಭದಲ್ಲಿ ಜಂಟಿ ಸಂಧಾನ ಸಮಿತಿಯ ಪ್ರಮುಖರಾದ ಬಿ.ಡಿ. ಹಿರೇಮಠ, ಉದಯ ನಾಯ್ಕ, ಶ್ರೀನಿವಾಸ ಘೋಟ್ನೇಕರ, ಸಲಿಂ ಸಯ್ಯದ್, ಭರತ್ ಪಾಟೀಲ, ಪ್ರಮೋದ್ ಕದಂ, ಹನ್ಮಂತ ಖಾರ್ಗಿ.ಎಸ್. ಅರಶಿನಗೇರಿ ಮುಂತಾದವರಿದ್ದರು. ನೂರಾರು ಕಾರ್ಮಿಕರು ಧರಣಿಯಲ್ಲಿ ಭಾಗವಹಿಸಿದ್ದರು.
ಪ್ರಮುಖ ಬೇಡಿಕೆಗಳು
ಮೇ 18 ರಿಂದ 31 ರವರೆಗಿನ ವೇತನವನ್ನು ನೀಡಬೇಕು. ಖಾಯಂ ಕಾರ್ಮಿಕರಿಗೆ ನೂರರಷ್ಟು ಪ್ರತಿಷತ ಕೆಲಸ ನೀಡಬೇಕು. ಲಾಕ್‍ಡೌನ್ ಸಮಯದಲ್ಲಿ ಕೆಲಸಕ್ಕೆ ಬಾರದ ಗುತ್ತಿಗೆ ಕಾರ್ಮಿಕರಿಗೆ ಶೇ. 50 ರಷ್ಟು ವೇತನ ನೀಡಬೇಕು. ಈಎಲ್ಲ ಬೇಡಿಕೆಗಳನ್ನು ಈಡೇರಿಸಲು ಕಂಪನಿಯ ಆಡಳಿತ ಮಂಡಳಿ ಒಪ್ಪಿಕೊಂಡಿದೆ ಎಂದು ಜೆ.ಎನ್.ಸಿ. ಪ್ರಮುಖರು ತಿಳಿಸಿದ್ದಾರೆ.