ದಾಂಡೇಲಿ ಸದ್ಯ ಕೊರೊನಾ ಆತಂಕದಿಂದ ನಿರಾಳವಾಗಿದೆ. ಇಲ್ಲಿಯವರೆಗೆ ಎರಡು ಪಾಸಿಟಿವ್ ಮಾತ್ರ ಬಂದಿದ್ದು, ಅದರಲ್ಲಿ ಓರ್ವನ ಎರಡನೆಯ ವರದಿ ನೆಗೆಟಿವ್ ಬಂದಿದೆ. ಓರ್ವ ಮಾತ್ರ ಕಾರವಾರ ಆಸ್ಪತ್ರೆಯಲ್ಲಿದ್ದಾನೆ.
ಈ ಈರ್ವರು ಸೋಂಕಿತರ ಸಂಪರ್ಕದಲ್ಲಿದ್ದವರು ಹಾಗೂ ಹೊರ ರಾಜ್ಯದಿಂದ ಬಂದವರದ್ದೂ ಸೇರಿ 173 ಜನರ ಗಂಟಲು ದ್ರವವನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ ಕಳೆದೆರಡು ದಿನದ ಹಿಂದೆ 118 ಜನರ ವರದಿ ನೆಗೆಟಿವ್ ಎಂದು ಬಂದಿತ್ತು. ಬುಧವಾರ ಮತ್ತೆ 53 ಜನರ ವರದಿ ಬಂದಿದ್ದು ಅದೂ ಕೂಡಾ ನೆಗೆಟಿವ್ ಎಂದು ಬಂದಿದೆ. ಇನ್ನು ಇಬ್ಬರ ವರದಿ ಮಾತ್ರ ಬಾಕಿಯಿದೆ ಎಂದು ವೈದ್ಯಾಧಿಕಾರಿ ರಾಜೇಶ ಪ್ರಸಾದ ತಿಳಿಸಿದ್ದಾರೆ. ಒಟ್ಟಾರೆ 173 ಜನರಲ್ಲಿ 171 ಜನರ ವರದಿ ನೆಗೆಟಿವ್ ಬಂದಿದ್ದು ಇಬ್ಬರ ವರದಿ ಮಾತ್ರ ಬರುವುದು ಬಾಕಿಯಿದೆ. ಭಾಗಶಹ ದಾಂಡೇಲಿ ಸದ್ಯ ಕೊರೊನಾ ಆತಂಕದಿಂದ ನಿರಾಳವಾಗಿದೆ.