ಕಾರವಾರ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದರ ಪರಿಣಾಮ ಕರಾವಳಿಯಲ್ಲಿ ನಿಸರ್ಗ ಚಂಡಮಾರುತದ ಭಯ ಆವರಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿದಂತೆ ಕರಾವಳಿ ತಾಲೂಕುಗಳಲ್ಲಿ ಮಂಗಳವಾರ ಗಾಳಿ, ಗುಡುಗು ಸಿಡಿಲಿನ ಮಳೆಯಾಗಿದ್ದು ಜಿಲ್ಲೆಯ ಘಟ್ಟದ ಮೇಲಿನ ತಾಲೂಕಿಗಳಲ್ಲಿಯೂ ಮೋಡ ಕವಿದ ವತಾವರಣ ಹಾಗೂ ಸಣ್ಣ ಮಳೆಯಾಗುತ್ತಿದೆ. ಈ ನಡುವೆ ಮಂಗಳವಾರದ ಗಾಳಿ ಮಳೆಗೆ ಹಲೆವೆಡೆ ಅವಘಡಗಳು ಸಂಭವಿಸಿವೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಕಾರವಾರದ ಮನೆಯೊಂದರಲ್ಲಿ ಶಾರ್ಟ ಸರ್ಕ್ಯುಟ್ ಆಗಿದೆ. ಮುಂಡಗೋಡದಲ್ಲಿ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ.
ಕಳೆದೆರೆಡು ದಿನಗಳ ಹಿಂದಷ್ಟೇ ಮುಂಗಾರು ಮಳೆ ಪಾದಾರ್ಪಣೆ ಮಾಡಿತ್ತು. ಮುಂಗಾರು ಮಳೆಯ ನವಿರಾದ ಸುಖ ಅನುಭವಿಸುವ ಆರಂಭದಲ್ಲಿಯೇ ಚಂಡ ಮಾರುತದ ಕರಿನೆರಳು ಕರಾವಳಿಯನ್ನಾವರಿಸಿಕೊಂಡಿದೆ. ಇದರ ಭಾಗವಾಗಿ ಜಿಲ್ಲಾಡಳಿತ ಕರಾವಳೆಯಲ್ಲಿ ಕಟ್ಟೆಚ್ಚರ ನೀಡಿದೆ.