ಇಂದು…..
ಶೃಂಗರಿಸಿದ ನಿನ್ನ
ಗುಡಿಯ ಗಡಿಯೊಳಗಿನ ಬಟ್ಟೆಯೊಳು
ಭಾಜಾ ಭಜಂತ್ರಿಗೆ ಜೀವ ನೀಡಿ
ದೊಂದಿಯ ಬೆಳಕಿನಲಿ ಧ್ವಜವಿಡಿದು
ಮಡಿ ಮೈಲಿಗೆಯಲಿ ಬೆನ್ನು ಬಾಗಿಸಿ
ಡೋಲು ಢಮರುಗ ಢಂಕಣವ ಬಡಿದು
ಢಾಳಾಗಿ ಮೆರೆಸಿ ದುಂಡು ಮಲ್ಲಿಗೆ ಮೇಳೈಸಿ
ಕಟ್ಟೆಯೊಳು ಹೊಸ ಬಟ್ಟೆ ಹಾಸಿ ಎತ್ತಿ ಆರತಿ
ರಥಾರೂಢನನ್ನಾಗಿಸಿ ನಿನ್ನ ಮಹಾಲಿಂಗ….
ಎಳೆಯಬೇಕಾಗಿತ್ತು ನಾವು
ಹಿಡಿದ ಹಗ್ಗದ ‘ ಕೈ’ ಕೆಂಪಾಗುವ ತನಕ!
ಆದರೇನಾ ಮಾಡುವುದು ಲಯದೊಡೆಯ
ನಮ್ಮ ತಲೆಯೇ ಕೆಂಪಾಗಿದೆಯಲ್ಲ ಈ
ಬಂದು ತೂಗುವ ವೈರಸಿನೆದುರು ದುಂಡಾಕೃತಿಯಲಿ
ಹಾಗಾಗಿ……
‘ಕೈ ‘ಬಿಟ್ಟಿದ್ದೇವೆ ನಿನ್ನ ಈ ಬಾರಿ
ನಾವಾರು ಬಿಳಿಯ ಚಾದರವ ಹೊದ್ದು
ಕಪ್ಪಾಗಬಾರದೆಂದು ಸುಟ್ಟು ಕರಕಲಾಗಿ
ಮನೆಯೊಳಗುಳಿದು ಬರಿಯ ಬಿಳಿಯ
ಗೋಡೆಯ ನೋಡಿ ಬಾಡುತ
” ಗೋವಿಂದನೇ ಕೋವಿಂದ್ (ಡ್)” ಎಂದು
ನಾಮವ ಪಠಿಸುತಲಿ 19 ಬಾರಿ
20ರಲಿ “ಕುಚ್ ಕರೋನಾ” ಎಂದು
ಹಾಡಿ ಬೇಡುತ ಅನವರತ…!
-ಕಲ್ಲಚ್ಚು ಮಹೇಶ ಆರ್. ನಾಯಕ್ ಮಂಗಳೂರು