ಮೌನ, ಸದ್ಯ ನನ್ನ ಕೊರಳನ್ನು
ಕುಣಕೆಯಿಂದ ಪಾರುಮಾಡಬಲ್ಲದು
ಆದರೆ, ಒಳಗೆ ಲಾಳಿಯಾಡುವ
ಲಾವಾರಸವನೆಂದಿಗೂ ತಣಿಸಲಾರದು
ಮೌನ, ನನ್ನ ಬಟ್ಟಲಿಗೆ
ಅನ್ನ ಕೊಡಬಹುದು ಮುಫತ್ತಾಗಿ
ಆದರೆ ನೆತ್ತರು ಕೀವುಗಟ್ಟುವ
ದ್ರೋಹದ ಯಾತನೆಯಿಂದ ಪಾರುಗಾಣಿಸದು
ಮೌನ,ಹೆಗಲಿಗೆ ಜರಿ ಶಾಲನ್ನು
ಕೈಗೆ ಸನ್ಮಾನ ಪತ್ರವನ್ನು ಕೊಡಬಹುದು
ಆದರೆ, ಲಜ್ಜೆಗೆಟ್ಟು ಕೇಡು ಸಂಧಾನಕ್ಕೆ
ಸಂಧುಹೋದ ಆತ್ಮದ ಮಯಾದೆ ಕಾಯುವ
ಕಫನ್ನಿನ ಬಟ್ಟೆಯೂ ಆಗಲಾರದು
ಮೌನ, ನಮ್ಮಷ್ಟಕ್ಕೇ ನಾವಿರುವ
ಸಭ್ಯತೆಯ ಸೋಗು ಕೊಡಬಹುದು
ಆದರೆ, ಒಳಗೊಳಗೇ ಅರೆಬೆಂದು
ಹಳಸಿದ ಜೀವತ್ರಾಣವನೆಂದೂ ಮರಳಿಸದು
ಮೌನ, ಹರಳುಗಟ್ಟಿದೆ
ಒಳ ಹೊಕ್ಕು ಪ್ರಾಣವ ಹೆನೆಗೆ ಮಾಡಿದೆ
ಉಪ್ಪು ನೀರು ಕುದಿಯೊಡೆದರೂ
ತಣ್ಣಗಿದೆ ಕಣ್ಣೀರು
ನನ್ನ ಮುದ್ದು ದೇಶವೇ
ನಿನ್ನ ಮೇಲಾಡುವ ಗಾಳಿಯೆಲೆಯಾಣೆ
ಎಲ್ಲರೆಲ್ಲರ ಉಸಿರು ತಾಕಿ ಜುಂ ಎನ್ನುವ ತ್ರಿವರ್ಣದಾಣೆ
ಮಕ್ಕಳ ನೆಂತರಂಟಿದ ಹಾದಿಯಾಣೆ
ಈ ಜವಳು ಸವಳಿನ ದುಭರ ದಿನಗಳಲಿ
ಮೌನವೊಂದು ಮಹಾಪಾಪ
ಕಾನ್ಸಂಟ್ರೇಶನ್ ಕ್ಯಾಂಪಿನಿಂದ ಕವಿ ಹೇಳುತ್ತಿದ್ದಾನೆ
ನೊಂದವರ ದ್ವನಿಯಾಗದ ಮೌನ ಮಹಾಪಾಪ.
— ಡಾ. ವಿನಯಾ ಒಕ್ಕುಂದ